ಉಡುಪಿ : ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣದ ವಿವರಗಳನ್ನು ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ನಿಖರವಾಗಿ ದಾಖಲಿಸುವಂತೆ ನೋಂದಣಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು. ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಜನನ–ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನನ ಮತ್ತು ಮರಣ ನೋಂದಣಿ ಭವಿಷ್ಯದ ಹಲವು ಸರ್ಕಾರಿ ಹಾಗೂ ಕಾನೂನುಬದ್ಧ ಕಾರ್ಯಗಳಿಗೆ ಅತ್ಯಂತ ಪ್ರಮುಖವಾಗಿದ್ದು, ಸಂಬಂಧಪಟ್ಟ ಪ್ರಮಾಣಪತ್ರಗಳು ಅಗತ್ಯವಾಗುತ್ತವೆ. ಹೀಗಾಗಿ ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನೋಂದಣಾಧಿಕಾರಿಗಳು ಈ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿ, ಯಾವುದೇ ರೀತಿಯ ತಪ್ಪುಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ನೋಂದಣಿ ಸಂದರ್ಭದಲ್ಲಿ ತಂದೆ–ತಾಯಿಯ ಹೆಸರು, ಲಿಂಗ, ಘಟನೆ ನಡೆದ ಸ್ಥಳ, ದಿನಾಂಕ ಹಾಗೂ ವಿಳಾಸ ಸೇರಿದಂತೆ ಮೂಲ ಮಾಹಿತಿಯಲ್ಲಿ ತಪ್ಪುಗಳು ದಾಖಲಾಗುತ್ತಿರುವುದು ಕಂಡುಬರುತ್ತಿದೆ. ಸ್ಥಳ ಮಹಜರು ಮಾಡದೇ ಮರಣ ಪ್ರಮಾಣಪತ್ರ ಸೃಜಿಸುವುದು, ನೋಂದಣಿ ಘಟಕದ ವ್ಯಾಪ್ತಿಯನ್ನು ಮೀರಿ ನೋಂದಣಿ ಮಾಡುವುದು ಹಾಗೂ ಮೂಲ ದಾಖಲೆಗಳನ್ನು ಪರಿಶೀಲಿಸದೆ ವಿವರಗಳನ್ನು ದಾಖಲಿಸುವಂತಹ ಲೋಪಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಮಗುವಿನ ಹೆಸರು ಅಥವಾ ಜೈವಿಕ ತಂದೆ–ತಾಯಿಯ ಹೆಸರನ್ನು ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಜೈವಿಕ ತಂದೆ–ತಾಯಿಯ ಜಂಟಿ ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಲ್ಲಿ ನೋಂದಣಿ ಮಾಡುವ ಮುನ್ನ ಕರಡು ಪ್ರತಿಯನ್ನು ಸಂಬಂಧಪಟ್ಟವರಿಗೆ ತೋರಿಸಿ, ಅವರಿಂದ ಅನುಮೋದನೆ ಪಡೆಯುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಹೇಳಿದರು. ಜನನದ ಸಂದರ್ಭದಲ್ಲೇ ಮಗು ಮೃತಪಟ್ಟಿರುವ ಪ್ರಕರಣಗಳ ನೋಂದಣಿಯಲ್ಲಿ ಮರಣದ ಕಾರಣವನ್ನು ದಾಖಲಿಸಲು ಪೋರ್ಟಲ್‌ನಲ್ಲಿ ಸೂಕ್ತ ಆಯ್ಕೆ ಇಲ್ಲದಿರುವ ಕುರಿತು ದೂರುಗಳು ಬರುತ್ತಿವೆ. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಪೋರ್ಟಲ್‌ನಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಪತ್ರ ಬರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿರುವ ಘಟನೆಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಅಲಭ್ಯ ಪ್ರಮಾಣಪತ್ರಗಳನ್ನು ನೀಡಬೇಕು. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಸ್ಥಳೀಯ ಪೊಲೀಸರ ಪರಿಶೀಲನೆಯ ನಂತರವೇ ಅಲಭ್ಯ ಪ್ರಮಾಣಪತ್ರ ನೀಡಬೇಕು ಎಂದರು. ಜನನ–ಮರಣ ನೋಂದಣಿ ಘಟಕಗಳ ಕಾರ್ಯವೈಖರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲಿಸಬೇಕು. ಎಲ್ಲಾ ನೋಂದಣಾಧಿಕಾರಿಗಳು, ಉಪನೋಂದಣಾಧಿಕಾರಿಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನೋಂದಣಿ ಕಾರ್ಯದ ಕುರಿತು ಸಮರ್ಪಕ ತರಬೇತಿ ನೀಡಿ ಬಳಿಕ ಕಾರ್ಯಕ್ಕೆ ನಿಯೋಜಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಇದೇ ವೇಳೆ ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಋತುವಿನ ಬೆಳೆ ಸಮೀಕ್ಷೆ ಕ್ಷೇತ್ರ ಮರುಹೊಂದಾಣಿಕೆ ವರದಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ತಾಲೂಕುವಾರು ವರದಿಯನ್ನು ಕ್ರೋಢೀಕರಿಸಿ ಜಿಲ್ಲಾ ಮಟ್ಟಕ್ಕೆ ಕಳುಹಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 574 ಜನನ–ಮರಣ ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 2026ರ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 1,256 ಹಾಗೂ ನಗರ ವ್ಯಾಪ್ತಿಯಲ್ಲಿ 7,095 ಸೇರಿದಂತೆ ಒಟ್ಟು 8,351 ಜನನಗಳು ನೋಂದಣಿಯಾಗಿವೆ. ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 5,399 ಹಾಗೂ ನಗರ ಪ್ರದೇಶದಲ್ಲಿ 3,583 ಸೇರಿದಂತೆ ಒಟ್ಟು 8,982 ಮರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ 39 ನಿರ್ಜೀವ ಜನನಗಳು ಕೂಡ ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಹೆಣ್ಣು–ಗಂಡಿನ ಅನುಪಾತ 912 ಇದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ವಿ. ದೊಡಮನಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಡಿಎಚ್‌ಒ ಡಾ. ಬಸವರಾಜ್ ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


