Wednesday, September 16, 2026

spot_img

ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ಸೆ.18ರಂದು ಸಿಎಂಗೆ ಮನವಿ

ಉಡುಪಿ : ಪಶ್ಚಿಮ ಘಟ್ಟ ತಪ್ಪಲು ಪ್ರದೇಶಗಳ ನಿವಾಸಿಗಳ ಬದುಕಿಗೆ ಮಾರಕವಾಗುವ ಸಾಧ್ಯತೆಯಿರುವ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸೆ.18ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಬ್ರಿ ತಾಲೂಕಿಗೆ ಆಗಮಿಸುವ ಸಂದರ್ಭದಲ್ಲಿ ವರದಿ ಬಾಧಿತ ಪ್ರದೇಶಗಳ ಜನರ ಪರವಾಗಿ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದ್ದು, ಜನವಿರೋಧಿ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ಜನರು ನೂರಾರು ವರ್ಷಗಳಿಂದ ಭತ್ತ, ಅಡಿಕೆ, ತೆಂಗು, ಕಾಳುಮೆಣಸು, ತರಕಾರಿ, ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಕೃಷಿ ಜೀವನ ನಡೆಸುತ್ತಿದ್ದಾರೆ. ಅಧಿಸೂಚನೆಯಿಂದ ಸ್ಥಳೀಯರ ಭೂಹಕ್ಕು ಹಾಗೂ ಜೀವನೋಪಾಯಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಜನರ ಅಹವಾಲುಗಳನ್ನು ಆಲಿಸದೆ, ಗ್ರಾಮಸಭೆಗಳನ್ನು ನಡೆಸದೆ ಕೇವಲ ವೈಮಾನಿಕ ಸಮೀಕ್ಷೆ ಆಧರಿಸಿ ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ನಿರ್ಧಾರ ಕೈಗೊಳ್ಳುವುದು ಖಂಡನೀಯ ಎಂದರು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಮುನ್ನವೂ ಕರಾವಳಿ ಅಭಿವೃದ್ಧಿಯ ಕುರಿತು ಹಲವು ಬಾರಿ ಭರವಸೆ ನೀಡಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪುಟ ಸಭೆ ನಡೆಸಲು ಮುಂದಾಗಿರುವುದು ಕರಾವಳಿ ಭಾಗದ ಅಭಿವೃದ್ಧಿಯ ಬಗ್ಗೆ ಸರ್ಕಾರದ ಕಾಳಜಿಯನ್ನು ತೋರಿಸುತ್ತದೆ. ಕರ್ನಾಟಕ ರಾಜ್ಯ ಉದಯವಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಯುತ್ತಿರುವುದು ಮಹತ್ವದ ಬೆಳವಣಿಗೆ ಎಂದರು.

ಕಳೆದ ಮೂರು ದಶಕಗಳಿಂದ ಕರಾವಳಿಯಲ್ಲಿ ಬಿಜೆಪಿ ಸತತವಾಗಿ ಚುನಾವಣಾ ಗೆಲುವು ಸಾಧಿಸಿದ್ದರೂ ಈ ಭಾಗದ ಜನರ ಅಭಿವೃದ್ಧಿಗೆ ಅದರ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದ ಅವರು, ಧರ್ಮದ ಹೆಸರಿನಲ್ಲಿ ಸಂಘರ್ಷಗಳನ್ನು ಸೃಷ್ಟಿಸಿ ಜಿಲ್ಲೆಯ ಶಾಂತಿ, ಸೌಹಾರ್ದತೆಗೆ ಧಕ್ಕೆ ತಂದಿರುವುದೇ ಬಿಜೆಪಿಯ ಕೊಡುಗೆ ಎಂದು ಟೀಕಿಸಿದರು. ಕರಾವಳಿ ಜಿಲ್ಲೆಗಳು ಸೇವಾ ವಲಯದಲ್ಲಿ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಶಿಕ್ಷಣ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರಾವಳಿಯ ಪಾತ್ರ ದೊಡ್ಡದಾಗಿದೆ. ಬಂದರು, ವಿಮಾನ ನಿಲ್ದಾಣ, ರೈಲು ಸಂಪರ್ಕ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಹೊಂದಿರುವ ಕರಾವಳಿಗೆ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯವಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.

ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವುದು ಹಾಗೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ತುಳು ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ಪರಿಗಣಿಸಿ ತುಳು ಅಭಿವೃದ್ಧಿ ನಿಗಮ ರಚಿಸಬೇಕು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದರ ಜತೆಗೆ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಿನಾಥ್ ಭಟ್, ಯೋಗೀಶ್ ಆಚಾರ್ಯ, ಪ್ರದೀಪ್ ಬೇಲಾಡಿ, ಅಜಿತ್ ಹೆಗ್ಡೆ, ಅನಿಲ್ ಪೂಜಾರಿ ಮಾಳ, ಭಾನು ಭಾಸ್ಕರ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles