Tuesday, October 6, 2026

spot_img

ಕನ್ಯಾಬಲಿ ಕಾರಂತರ ಪ್ರಾತಿನಿಧಿಕ ಕಾದಂಬರಿ: ಶಾಲಿನಿ ಯು.ಬಿ.

ಉಡುಪಿ: ಹೆಣ್ಣಿನ ಬದುಕನ್ನು ನಿಯಂತ್ರಿಸುವ ಸಾಮಾಜಿಕ ಸಂಪ್ರದಾಯಗಳು, ವಿಧವಾ ಪದ್ಧತಿ, ಪುರುಷಾಧಿಪತ್ಯ, ವಿವಾಹದ ಕುರಿತಾದ ಏಕಮುಖ ನೈತಿಕತೆ ಹಾಗೂ ಆರ್ಥಿಕ ಅಸಹಾಯಕತೆಯಿಂದ ರೂಪುಗೊಂಡ ಸಾಮಾಜಿಕ ದುರಂತಗಳನ್ನು ಪ್ರಶ್ನಿಸಿ, ಮಹಿಳೆಯ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ ಡಾ. ಶಿವರಾಮ ಕಾರಂತರ ಕನ್ಯಾಬಲಿ ಕಾದಂಬರಿ ಅವರ ಪ್ರಾತಿನಿಧಿಕ ಕೃತಿಗಳಲ್ಲೊಂದು ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶಾಲಿನಿ ಯು.ಬಿ. ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕೋಟೇಶ್ವರದ ಡಾ. ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಅರಿವಿನ ಬೆಳಕು ಉಪನ್ಯಾಸ ಮಾಲೆ–18 ಕಾರ್ಯಕ್ರಮದಲ್ಲಿ ಅವರು ಕನ್ಯಾಬಲಿ ಕಾದಂಬರಿಯಲ್ಲಿ ಕಾರಂತರ ಸಾಮಾಜಿಕ ದೃಷ್ಟಿಕೋನ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ, ಇಂದಿನ ಯುವ ಪೀಳಿಗೆಗೆ ಕಾರಂತರ ವಿಚಾರಧಾರೆ ಮತ್ತು ಸಾಹಿತ್ಯದ ಪರಿಚಯ ಮಾಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕುರಿತ ಆಸಕ್ತಿ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಕಾರಂತರ ಕೃತಿಗಳನ್ನು ಓದುವ ಮೂಲಕ ಯುವಜನರು ತಮ್ಮ ವೈಚಾರಿಕತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ಕಾರಂತರ ಕೃತಿಗಳು ಓದುಗರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ವಿದ್ಯಾರ್ಥಿಗಳು ಕಾರಂತರ ಸಾಹಿತ್ಯವನ್ನು ಹೆಚ್ಚು ಓದಿ, ಅವರ ಚಿಂತನೆಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರಂತರ ಸಾಹಿತ್ಯದಲ್ಲಿ ಸಾಮಾಜಿಕ ಸಮಸ್ಯೆಗಳ ಸೂಕ್ಷ್ಮ ಅವಲೋಕನ, ವೈಚಾರಿಕ ಪ್ರಶ್ನೆಗಳು ಹಾಗೂ ವೈಜ್ಞಾನಿಕ ಮನೋಭಾವದ ಪ್ರತಿಪಾದನೆ ಕಾಣಸಿಗುತ್ತದೆ. ಸಮಾಜದಲ್ಲಿನ ಅಸಮಾನತೆ, ಕಂದಾಚಾರ ಹಾಗೂ ಮೌಢ್ಯಗಳನ್ನು ಪ್ರಶ್ನಿಸುವ ಮೂಲಕ ಆರೋಗ್ಯಕರ ಸಾಮಾಜಿಕ ಚಿಂತನೆಗೆ ಅವರು ದಾರಿ ತೋರಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಭಾರತಿ ಸ್ವಾಗತಿಸಿದರು. ಪ್ರೇಮಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles