ಉಡುಪಿ : ಉಡುಪಿ ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲೆಯ ಜನರ ಬಹುಕಾಲದ ಕನಸಾಗಿರುವ ಜಿಲ್ಲಾಸ್ಪತ್ರೆಯ ನಿರ್ಮಾಣ ಕಾಮಗಾರಿ 2021ರ ಡಿಸೆಂಬರ್ನಲ್ಲಿ ಆರಂಭಗೊಂಡಿದ್ದು, ಇದೀಗ ಅಂತಿಮ ಹಂತದಲ್ಲಿದೆ. ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಅಗತ್ಯ ವೈದ್ಯಕೀಯ ಸೌಲಭ್ಯಗಳು, ಚಿಕಿತ್ಸಾ ವ್ಯವಸ್ಥೆ ಹಾಗೂ ಸಿಬ್ಬಂದಿ ನಿಯೋಜನೆಯೊಂದಿಗೆ 250 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ತ್ವರಿತವಾಗಿ ಲೋಕಾರ್ಪಣೆಗೊಳಿಸುವಂತೆ ಶಾಸಕರು ಮನವಿ ಮಾಡಿದರು.

ಬ್ರಹ್ಮಾವರ ತಾಲೂಕು ರಚನೆಯಾಗಿ ಸುಮಾರು ಎಂಟು ವರ್ಷಗಳಾಗಿದ್ದು, ಪಟ್ಟಣವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳ ಜನರಿಗೆ ಪ್ರಮುಖ ಆರೋಗ್ಯ ಸೇವೆ ಒದಗಿಸುತ್ತಿರುವ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸಿ, ಸ್ಥಳೀಯವಾಗಿ ಸಮಗ್ರ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಅಗತ್ಯ ಅನುದಾನ ಒದಗಿಸುವಂತೆಯೂ ಕೋರಿದರು. ಅಲ್ಲದೆ, ಆಸ್ಪತ್ರೆಯ ಮುಂಭಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಬಿ.ಆರ್. ಶೆಟ್ಟಿ ಹೈಟೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಉದ್ದೇಶಕ್ಕಾಗಿ ಭೂ ಕಾಮಗಾರಿ ನಡೆದಿರುವ ಪ್ರದೇಶವನ್ನು ವಾಹನ ನಿಲುಗಡೆಗೆ ಬಳಸಿಕೊಳ್ಳುವುದು ಹಾಗೂ ಸರ್ಕಾರಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸ್ಥಾಪನೆಗೆ ವಿಶೇಷ ಮುತುವರ್ಜಿ ವಹಿಸುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಯು.ಟಿ. ಖಾದರ್, ಪ್ರಸ್ತಾಪಿತ ಬೇಡಿಕೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


