ಉಡುಪಿ : ಅಜ್ಮೀರ್ ದರ್ಗಾ ದರ್ಶನ ಮುಗಿಸಿ ಕುಟುಂಬದೊಂದಿಗೆ ಕಾಸರಗೋಡಿಗೆ ಮರಳುತ್ತಿದ್ದ ವೇಳೆ 68 ವರ್ಷದ ವೃದ್ಧರೊಬ್ಬರು ರೈಲಿನಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮುಸಾ ಅಲಿಯಾಸ್ ಅಬುಸಾಲಿ (68) ಕಾಣೆಯಾದವರು. ಕಾಸರಗೋಡು ಮೂಲದ ಮುಸ್ತಪಾ ಅವರ ತಂದೆ ಮುಸಾ ಅಲಿಯಾಸ್ ಅಬುಸಾಲಿ ಹಾಗೂ ಕುಟುಂಬದವರು ಜೂನ್ 22ರಂದು ಕಾಸರಗೋಡಿನಿಂದ ಅಜ್ಮೀರ್ಗೆ ರೈಲಿನಲ್ಲಿ ತೆರಳಿದ್ದು, ಜೂನ್ 23ರಂದು ದರ್ಗಾದಲ್ಲಿ ದರ್ಶನ ಪಡೆದಿದ್ದರು. ಬಳಿಕ ಜೂನ್ 26ರಂದು ಅಜ್ಮೀರ್ ರೈಲು ನಿಲ್ದಾಣದಿಂದ ಮುರುಸಾದ್ ಎಕ್ಸ್ಪ್ರೆಸ್ ರೈಲಿನ ಎಸ್-4 ಬೋಗಿಯ ಕಾಯ್ದಿರಿಸಿದ ಆಸನಗಳಲ್ಲಿ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿದ್ದರು.

ಜೂನ್ 27ರಂದು ರಾತ್ರಿ ಕಾರವಾರ ಸಮೀಪ ಕುಟುಂಬದವರೊಂದಿಗೆ ಊಟ ಮಾಡಿ ಎಲ್ಲರೂ ಮಲಗಿದ್ದರು. ಆದರೆ ಮುಂಜಾನೆ ಸುಮಾರು 1 ಗಂಟೆ ವೇಳೆಗೆ ರೈಲು ಮಂಗಳೂರು ಸಮೀಪ ತಲುಪಿದಾಗ ಮುಸಾ ಅಬುಸಾಲಿ ಅವರು ತಮ್ಮ ಆಸನದಲ್ಲಿ ಕಾಣಿಸಿರಲಿಲ್ಲ. ಕುಟುಂಬದವರು ರೈಲಿನ ಬೋಗಿ ಹಾಗೂ ಶೌಚಾಲಯಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ವಯೋವೃದ್ಧರಾದ ಮುಸಾ ಅಬುಸಾಲಿ ಅವರು ನಡೆಯಲು ವಾಕಿಂಗ್ ಸ್ಟಿಕ್ ಬಳಸುತ್ತಿದ್ದರು. ರೈಲು ಯಾವುದಾದರೂ ನಿಲ್ದಾಣದಲ್ಲಿ ನಿಂತ ವೇಳೆ ಅವರು ಇಳಿದು ದಿಕ್ಕುತಪ್ಪಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬೈಂದೂರು ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವೃದ್ಧರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರಿಗೆ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.


