ಉಡುಪಿ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪದ್ಮನಾಭ ನಗರದ ಮಹಾಮಾಯ ಕೃಪಾ ನಿವಾಸದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಒಂದು ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನ.26ರಂದು ನಡೆದಿದೆ.

ಮನೆಯ ಮಾಲಕ ಗಣೇಶ ಪೈ (39) ಅವರು ನ.26ರಂದು ಬೆಳಿಗ್ಗೆ 11.10ರಿಂದ ಮಧ್ಯಾಹ್ನ 1 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಇಲ್ಲದ ವೇಳೆ ಕಳ್ಳರು ಮನೆಯ ಮುಂಭಾಗದ ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ಬೆಡ್‌ರೂಂನಲ್ಲಿದ್ದ ಕಪಾಟಿನ ಬೀಗವನ್ನೂ ಮುರಿದು ಅದರೊಳಗಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಕಳವಾದ ವಸ್ತುಗಳಲ್ಲಿ ಒಂದು ಲಕ್ಷ ರೂ. ನಗದು, ಒಂದು ಪವನ್ ತೂಕದ ಚಿನ್ನದ ಸರ, ನಾಲ್ಕು ಪವನ್ ತೂಕದ ಚಿನ್ನದ ಕಡಗ, 7 ಗ್ರಾಂ ತೂಕದ ಉಂಗುರ ಹಾಗೂ ಒಂದು ಗ್ರಾಂ ತೂಕದ ಚಿನ್ನದ ನಾಣ್ಯ ಸೇರಿವೆ. ಕಳವಾದ ಚಿನ್ನಾಭರಣ ಹಾಗೂ ನಗದಿನ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂ. ಎಂದು ತಿಳಿಸಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


