ಉಡುಪಿ: ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಮೂಡ್ಲಕಟ್ಟೆ ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸಿರುವ ಆರೋಪದ ಮೇರೆಗೆ 20 ವರ್ಷದ ಯುವಕನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.26ರಂದು ಬೆಳಿಗ್ಗೆ 11.45ರ ಸುಮಾರಿಗೆ ಮೂಡ್ಲಕಟ್ಟೆ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಅಮಲು ಪದಾರ್ಥ ಸೇವಿಸಿದ ಸ್ಥಿತಿಯಲ್ಲಿರುವುದಾಗಿ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಿರಂಜನ್ ಗೌಡ ಬಿ.ಎಸ್. ಅವರಿಗೆ ಮಾಹಿತಿ ಲಭಿಸಿತ್ತು. ಅದರಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಖಲೀಲ್ (20), ನೇರಳಕಟ್ಟೆ ಅಂಚೆ, ಕರ್ಕುಂಜೆ ಗ್ರಾಮ ಎಂಬಾತನನ್ನು ವಿಚಾರಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು.

ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಆತ ಗಾಂಜಾ ಸೇವಿಸಿರುವುದನ್ನು ದೃಢಪಡಿಸಿ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


