ಉಡುಪಿ: ನಾನು ಯಾರಿಗೆ ಎಷ್ಟು ಹಣ ನೀಡಬೇಕಿದೆ ಎಂಬುದರ ಸಂಪೂರ್ಣ ಪಟ್ಟಿಯನ್ನು ನೀಡಲು ಸಿದ್ಧನಿದ್ದೇನೆ. ಆದರೆ ಶಾಸಕ ಸುನಿಲ್ ಕುಮಾರ್ ಅವರು ನನಗೆ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಹಣವನ್ನು ಬ್ಯಾಂಕ್ ಮೂಲಕ ವರ್ಗಾಯಿಸಿದ್ದಾರೆಯೇ ಅಥವಾ ಗೋಣಿ ಚೀಲದಲ್ಲಿ ನೀಡಿದ್ದಾರೆಯೇ ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಸವಾಲು ಹಾಕಿದ್ದಾರೆ. ತಮ್ಮ ವಿರುದ್ಧ ಶಾಸಕ ಸುನಿಲ್ ಕುಮಾರ್ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಅವರು, ನಾನು ಯಾರಿಗೆ ಹಣ ನೀಡಬೇಕಿದೆ ಎಂಬ ಮಾಹಿತಿ ಪಡೆಯಲು ಶಾಸಕರು ಮನೆಮನೆಗೆ ಅಲೆಯುವ ಅಗತ್ಯವಿಲ್ಲ. ನನ್ನ ಕಚೇರಿಯ ಸಿಬ್ಬಂದಿಗೆ ಸೂಚಿಸಿದರೆ ತಕ್ಷಣವೇ ವ್ಯವಹಾರದ ಸಂಪೂರ್ಣ ಪಟ್ಟಿ ಸಿದ್ಧಪಡಿಸಿ ನೀಡುತ್ತೇನೆ. ಅದನ್ನು ಶಾಸಕರು ಪರಿಶೀಲಿಸಲಿ. ಅದೇ ರೀತಿ, ನನಗೆ ಹಣ ನೀಡಿರುವ ಬಗ್ಗೆ ತಮ್ಮ ಬಳಿಯಿರುವ ದಾಖಲೆಗಳನ್ನೂ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಪರಶುರಾಮ ಥೀಮ್ ಪಾರ್ಕ್ ವಿವಾದದಲ್ಲಿ ಶಾಸಕರ ಪರವಾಗಿ ವಕಾಲತ್ತು ವಹಿಸುತ್ತಿರುವವರ ವಿರುದ್ಧವೂ ವಾಗ್ದಾಳಿ ನಡೆಸಿದ ಉದಯಕುಮಾರ್ ಶೆಟ್ಟಿ, ಶಾಸಕರ ಬೇನಾಮಿ ಹಣ ಪಡೆದು ಶಾಲೆ ನಡೆಸುತ್ತಿರುವವರು ಇಂದು ಪರಶುರಾಮನ ಪರವಾಗಿ ಮಾತನಾಡುತ್ತಿದ್ದಾರೆ. ಶಾಸಕರ ಭ್ರಷ್ಟಾಚಾರದ ಹಣದಲ್ಲಿ ಪಾಲು ಪಡೆದವರೇ ಅವರ ಬೆಂಬಲಕ್ಕೆ ನಿಂತು ತಂಡ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ತಮ್ಮ ಬಳಿ ಸಾಕಷ್ಟು ವೈಯಕ್ತಿಕ ಮಾಹಿತಿಗಳಿದ್ದು, ಅಗತ್ಯ ಬಿದ್ದರೆ ಒಂದೊಂದಾಗಿ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು. ತಮ್ಮ ಬಳಿ ಚೀಟಿ ಸಿದ್ಧವಿದೆ ಎಂದು ಶಾಸಕರು ಹೇಳುತ್ತಿದ್ದರೆ, ಅದರಲ್ಲಿರುವ ವಿವರಗಳನ್ನು ಇಂದೇ ಜನರ ಮುಂದೆ ಇಡಲಿ. ಅವರು ಮಾಡಿದ ಪಾಪದ ಫಲವನ್ನು ಈಗಾಗಲೇ ಅನುಭವಿಸುತ್ತಿದ್ದಾರೆ. ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರಿಂದ ನಾನು ಯಾವುದೇ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಪ್ರತಿಮೆ ಮರುನಿರ್ಮಾಣಕ್ಕೆ ಸರ್ಕಾರ ಬದ್ಧ

ಪರಶುರಾಮನ ಪ್ರತಿಮೆ ಮರುನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಜಿಲ್ಲಾಧಿಕಾರಿಯೂ ಹೊಸ ಟೆಂಡರ್ ಕರೆದು ಪ್ರತಿಮೆ ಮರುನಿರ್ಮಾಣಕ್ಕೆ ಆದೇಶ ಹೊರಡಿಸಿದ್ದಾರೆ. ಪ್ರತಿಮೆ ನಿರ್ಮಾಣ ಪೂರ್ಣಗೊಳ್ಳುವವರೆಗೆ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಪರಶುರಾಮನ ಪ್ರತಿಮೆ ಪ್ರತಿಷ್ಠಾಪನೆಯಾಗಬೇಕು. ಕಾರ್ಕಳದ ಗೌರವ ಮತ್ತು ಘನತೆಗೆ ಧಕ್ಕೆಯಾಗದಂತೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಹೇಳಿದರು.
22 ವರ್ಷಗಳ ಸಾಧನೆಯ ಲೆಕ್ಕ ಕೊಡಲಿ

ಶಾಸಕ ಸುನಿಲ್ ಕುಮಾರ್ ಅವರ ರಾಜಕೀಯ ಸಾಧನೆಯನ್ನು ಪ್ರಶ್ನಿಸಿದ ಉದಯಕುಮಾರ್ ಶೆಟ್ಟಿ, ಕಳೆದ 22 ವರ್ಷಗಳ ಅವಧಿಯಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ಜನರ ಮುಂದೆ ಇಡಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ತರಲು ಕೂಡ ಅವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ಪರಶುರಾಮ ಥೀಮ್ ಪಾರ್ಕ್ನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇವಲ ನಾಲ್ಕೂವರೆ ಕೋಟಿ ರೂಪಾಯಿ ಸಾಕು ಎಂದು ಈ ಹಿಂದೆ ಹೇಳಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 60 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ನಾಲ್ಕೂವರೆ ಕೋಟಿ ರೂಪಾಯಿಯನ್ನು ಥೀಮ್ ಪಾರ್ಕ್ ಕಾಮಗಾರಿಗೆ ಬಳಸಿಕೊಂಡು ಯೋಜನೆಯನ್ನು ಪೂರ್ಣಗೊಳಿಸಬಹುದಿತ್ತು. ಆದರೆ ಶಾಸಕರು ಆ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು. ಪರಶುರಾಮನ ಪ್ರತಿಮೆ ಶಾಸ್ತ್ರೋಕ್ತವಾಗಿ ಮರುಸ್ಥಾಪನೆಯಾಗಬೇಕು. ಆ ಮೂಲಕ ಕಾರ್ಕಳದ ಗೌರವ ಮತ್ತು ಘನತೆ ಉಳಿಯಬೇಕು. ಶಾಸಕರ ಸುಳ್ಳು ಆರೋಪಗಳಿಗೆ ಇನ್ನು ಮುಂದಾದರೂ ಅಂತ್ಯ ಬೀಳಲಿ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.


