ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ ಸಾವಿನ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಬೇಕು. ಪ್ರಕರಣದ ತನಿಖೆಯಲ್ಲಿ ಹಲವು ಲೋಪಗಳಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಗಳ ಬಗ್ಗೆಯೂ ಅನುಮಾನಗಳಿವೆ. ಉನ್ನತಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪ್ರದೀಪ್ ಪೂಜಾರಿ ಅವರ ಸಹೋದರ ದಿಲೀಪ್ ಪೂಜಾರಿ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸಮಾಜಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು. ಪ್ರದೀಪ್ ಪೂಜಾರಿ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದರಿಂದ ಆಕೆಯ ದೇಹದ ಮೇಲೆ ಬಾಹ್ಯ ಗಾಯಗಳಾಗಿದ್ದವು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಆದರೆ, ವೈದ್ಯರು ಆಕೆಯ ದೇಹದಲ್ಲಿ ಯಾವುದೇ ಗಾಯಗಳಿಲ್ಲ ಎಂದು ಪ್ರಮಾಣಪತ್ರ ನೀಡಿದ್ದಾರೆ. ಹೀಗಿರುವಾಗ ಎಸ್ಪಿ ಯಾವ ಆಧಾರದ ಮೇಲೆ ಗಾಯಗಳಿದ್ದವು ಎಂದು ಹೇಳಿಕೆ ನೀಡಿದ್ದಾರೆ? ಎಂದು ದಿಲೀಪ್ ಪ್ರಶ್ನಿಸಿದರು.

ಪ್ರದೀಪ್ ಪೂಜಾರಿ ಕೊಲೆ ಮಾಡುವ ಉದ್ದೇಶದಿಂದಲೇ ಯುವತಿಯ ಮನೆಗೆ ತೆರಳಿದ್ದಾನೆ ಎಂದು ಎಸ್ಪಿ ಹೇಳಿಕೆ ನೀಡಿದ್ದಾರೆ. ಆದರೆ, ಯುವತಿಯ ಮನೆಯವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಲು ಮನೆಗೆ ತೆರಳಿರುವುದಾಗಿ ಪ್ರದೀಪ್ ಹೇಳಿರುವ ಮಾತುಗಳು ದಾಖಲಾಗಿವೆ ಎಂದು ದಿಲೀಪ್ ತಿಳಿಸಿದರು. ಇಂತಹ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಗಳನ್ನೇ ಸಮಾಜ ನಂಬುವಂತಾಗುತ್ತದೆ. ಪ್ರಕರಣದ ಸತ್ಯಾಂಶವನ್ನು ಪೊಲೀಸರು ಜನರ ಮುಂದಿಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಕರಣ ನಡೆದು ಎಂಟು ದಿನಗಳಾದರೂ ನೈಜ ಆರೋಪಿಗಳ ಬಂಧನವಾಗಿಲ್ಲ. ಹಿರಿಯಡಕ ಠಾಣೆಯ ಪಿಎಸ್ಐ ಅವರನ್ನು ಅಮಾನತುಗೊಳಿಸಿಯೂ ಇಲ್ಲ ಎಂದು ಆರೋಪಿಸಿದ ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ತಮಗೆ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದರು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.


