ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ನಿರ್ಮಿಸಲಾದ 108ನೇ ಮನೆ ಶಶಿರತ್ನ ಶನಿವಾರ ಹಿರಿಯಡಕದ ಕೊಂಡಾಡಿಯಲ್ಲಿ ಹಸ್ತಾಂತರಗೊಂಡಿತು. ಅಲೆವೂರಿನ ಎ. ರಘುಪತಿ ಭಟ್ ಅವರು ತಮ್ಮ 84ನೇ ಹುಟ್ಟುಹಬ್ಬದ ಶುಭಾವಸರದಲ್ಲಿ, ತಮ್ಮ ತಂದೆ ಅಲೆವೂರು ವಾಸುದೇವ ಭಟ್, ತಾಯಿ ರುಕ್ಮಿಣಿಯಮ್ಮ, ಸಹೋದರಿ ಶಶಿಕಲಾ ತಂತ್ರಿ ಹಾಗೂ ಧರ್ಮಪತ್ನಿ ರತ್ನ ಅವರ ಸ್ಮರಣಾರ್ಥ ಈ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ, ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ (ಅನಿತಾ ಮತ್ತು ಗೋಪಾಲ್ ದಂಪತಿಯ ಪುತ್ರ) ಹಾಗೂ ಅವರ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಾಯಿತು. ಜ್ಯೋತಿ ಬೆಳಗಿಸಿ ಮನೆ ಉದ್ಘಾಟಿಸಿದ ರಘುಪತಿ ಭಟ್ ಮಾತನಾಡಿ, ನನ್ನ ತಂದೆ, ತಾಯಿ, ಪತ್ನಿ ಮತ್ತು ಸಹೋದರಿ ಬದುಕಿನ ಬೇರೆ ಬೇರೆ ಕಾಲಘಟ್ಟಗಳಲ್ಲಿ ನನಗೆ ಆಸರೆಯಾಗಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞ. ದಾನಗಳಲ್ಲಿ ಆಶ್ರಯದಾನಕ್ಕೆ ವಿಶೇಷ ಮಹತ್ವವಿದೆ. ಆ ಸಂತೋಷ ಇಂದು ದೊರೆತಿದೆ. ಯಕ್ಷಗಾನ ಕಲಾರಂಗ ಈ ಕಾರ್ಯಕ್ಕೆ ಕಾರಣ. ಯಾವುದೇ ಶ್ರಮವಿಲ್ಲದೆ ಸುಂದರವಾದ ಮನೆಯನ್ನು ನಿರ್ಮಿಸಿಕೊಟ್ಟ ಸಂಸ್ಥೆಗೆ ಆಭಾರಿಯಾಗಿದ್ದೇನೆ. ಅಂಕಿತ್ ಮತ್ತು ಅವರ ತಂದೆ-ತಾಯಿ ಈ ಮನೆಯಲ್ಲಿ ಸುಖವಾಗಿರಲಿ ಎಂದು ಹಾರೈಸಿದರು.

ಹಿರಿಯಡಕದ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಮಾತನಾಡಿ, ಕಲಾರಂಗ ನಡೆಸುತ್ತಿರುವ ಮನೆ ನಿರ್ಮಾಣದ ಕಾರ್ಯ ಬ್ರಹ್ಮಕಲಶೋತ್ಸವ ಮಾಡಿಸಿದ ಪುಣ್ಯಕ್ಕೆ ಸಮಾನ. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿಕೊಂಡಿದ್ದೇನೆ ಎಂದರು. ಕೆ.ಪಿ.ಎಸ್. ಹಿರಿಯಡಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ, ಅಂಕಿತ್ ನಮ್ಮ ಶಾಲೆಯ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ. ತನ್ನ ಪ್ರತಿಭೆಯಿಂದ ವಿದ್ಯಾರ್ಥಿಯಾಗಿರುವಾಗಲೇ ತಂದೆ-ತಾಯಿಗೆ ಒಳ್ಳೆಯ ಮನೆ ಕಲ್ಪಿಸಿದ್ದಾನೆ. ಕಲಾರಂಗದ ಯಕ್ಷಶಿಕ್ಷಣ ಮಹಾಭಿಯಾನದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.

ಕೃಷ್ಣರಾಜ ತಂತ್ರಿ ಅವರು ಕಲಾರಂಗದ ಮನೆ ನಿರ್ಮಾಣ ಯೋಜನೆ ಸಂಸ್ಥೆಯ ಸಾಮಾಜಿಕ ಸ್ಪಂದನೆಗೆ ಸಾಕ್ಷಿಯಾಗಿದೆ ಎಂದರು. ಹೆರ್ಗ ದಿನಕರ ಶೆಟ್ಟಿ ಅವರು ತಾವು ಮನೆಭೇಟಿ ಮಾಡಿದ ವಿದ್ಯಾರ್ಥಿಗೆ ಮನೆ ನಿರ್ಮಿಸಿಕೊಟ್ಟಿರುವುದು ಸಂತೋಷದ ಸಂಗತಿ. ಯಕ್ಷಗಾನ ಕಲಾರಂಗ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಭಾವತಿ ವಿ. ಶೆಣೈ ಅವರು, ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಹಿಂದಿನ ಕಾರ್ಯಕ್ರಮಗಳಿಗೆ ಹಾಜರಾಗದಿರುವುದು ನಷ್ಟವೆನಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಯು. ವಿಶ್ವನಾಥ್ ಶೆಣೈ, ರಘುಪತಿ ಭಟ್ ಅವರ ಭಾವ ಕೃಷ್ಣರಾಜ ತಂತ್ರಿ, ಪುತ್ರಿ ಸವಿತಾ, ಸಂಜನಾ, ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಗಮಿಸಿ ಶುಭ ಹಾರೈಸಿ ಸಹಭೋಜನದಲ್ಲಿ ಪಾಲ್ಗೊಂಡರು. ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಯು. ಅನಂತರಾಜ್ ಉಪಾಧ್ಯ, ಹಿರಿಯಣ್ಣ ಕಿದಿಯೂರು, ಎ. ನಾಗಭೂಷಣ ಭಟ್, ಮರ್ಣೆ ಉಮೇಶ್ ಭಟ್, ಆರ್. ವಸಂತ, ಡಾ. ರಾಘವೇಂದ್ರ ರಾವ್, ಡಾ. ಪ್ರತಿಮಾ ಜೆ. ಆಚಾರ್ಯ, ಸುದರ್ಶನ ಬಾಯರಿ, ಸನಕ ಎಂ. ಕಡೆಕಾರ್, ಪ್ರಸನ್ನ ಹೆಗಡೆ, ಭರತ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಪೂರ್ವಾಹ್ನ ವೇದಮೂರ್ತಿ ಸೀತಾರಾಮ ಭಟ್ ಅವರಿಂದ ಗಣಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿದರು.


