ಉಡುಪಿ: ಸಕಲ ಸಿರಿ ಕ್ಷೇತ್ರಗಳ ತವರೂರು ಎಂಬ ಪ್ರಸಿದ್ಧಿ ಪಡೆದಿರುವ ನಾಲ್ಕು ಸ್ಥಾನಗಳ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನವೆಂಬರ್ 1ರಂದು ಭಾನುವಾರ ಕ್ಷೇತ್ರದಲ್ಲಿ ಶಿಲಾ ಮುಹೂರ್ತ, ದಾರು ಮುಹೂರ್ತ, ಶ್ರೀ ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ಅಂದು ಬೆಳಿಗ್ಗೆ 7.30ಕ್ಕೆ 48 ತೆಂಗಿನಕಾಯಿಗಳ ಗಣಯಾಗ ನಡೆಯಲಿದೆ. ಬೆಳಿಗ್ಗೆ 10.10ಕ್ಕೆ ಶ್ರೀ ಸೋದೆ ವಾದಿರಾಜ ಮಠದ ಯತಿವರ್ಯರಿಂದ ಸಂಸ್ಥಾನ ಪೂಜೆ ನೆರವೇರಲಿದೆ. ಬಳಿಕ 11.10ರ ಶುಭ ಮುಹೂರ್ತದಲ್ಲಿ ಶಿಲಾ ಮುಹೂರ್ತ ಹಾಗೂ ದಾರು ಮುಹೂರ್ತ ಜರುಗಲಿದೆ. ಬೆಳಿಗ್ಗೆ 11.15ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಮುಂಬೈಯ ಕೃಷ್ಣ ಪ್ಯಾಲೇಸ್ ಉದ್ಯಮಿ ಕೃಷ್ಣ ವೈ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ನಂದಳಿಕೆ ಚಾವಡಿ ಅರಮನೆಯ ಪ್ರದೀಪ್ ಹೆಗ್ಡೆ, ಕಾರ್ಯಾಧ್ಯಕ್ಷ ಶ್ರೀಕಾಂತ್ ರಾವ್, ದೇವಳದ ತಂತ್ರಿವರ್ಯ ಶ್ರೀನಿವಾಸ ತಂತ್ರಿ ಪಾಡಿಗಾರು, ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಬೆಳ್ಮಣ್ ದೇವಾಲಯದ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್, ನಂದಳಿಕೆ ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹಾಗೂ ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


