ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ರೇವಂತ (ಲಕ್ಷ್ಮೀ ಮತ್ತು ಚಂದ್ರ ನಾಯ್ಕ್ ದಂಪತಿಯ ಪುತ್ರ) ಅವರಿಗೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಿರ್ಮಿಸಲಾದ 106ನೇ ನೂತನ ಮನೆಯನ್ನು ಹಸ್ತಾಂತರಿಸಲಾಯಿತು. ಅಮೆರಿಕಾದ ಡಾ. ಸುದರ್ಶನ ಮೂರ್ತಿ ಮತ್ತು ಡಾ. ಲಕ್ಷ್ಮೀ ಮೂರ್ತಿ ದಂಪತಿಗಳು ನಿರ್ಮಿಸಿಕೊಟ್ಟ ‘ಪ್ರಾಣ ವಿಠಲ’ ಹೆಸರಿನ ಈ ಮನೆಯನ್ನು ಅ. 29ರಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಯಕ್ಷಗಾನ ಕಲಾರಂಗದ ಕಾರ್ಯಕರ್ತರ ನಿಸ್ವಾರ್ಥ ಸೇವೆ ಮತ್ತು ವಿಶ್ವಾಸಾರ್ಹತೆಯಿಂದ ಸಂಸ್ಥೆ ಮಹತ್ತರ ಸಾಧನೆ ಮಾಡಿದೆ. ಸಂಸ್ಥೆಯ ಸಾಮಾಜಿಕ ಕಳಕಳಿ ಎಲ್ಲರಿಗೂ ಅನುಕರಣೀಯ. ಉನ್ನತ ಸ್ಥಾನದಲ್ಲಿರುವ ಡಾ. ಸುದರ್ಶನ ಮೂರ್ತಿ ದಂಪತಿಗಳು ತಮ್ಮ ದೈವಭಕ್ತಿ ಮತ್ತು ಸಾಮಾಜಿಕ ಕಳಕಳಿಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಡಾ. ಸುದರ್ಶನ ಮೂರ್ತಿ ಮಾತನಾಡಿ, ಜನರ ಸೇವೆಯಲ್ಲಿ ಜನಾರ್ದನನನ್ನು ಕಾಣುವ ಯಕ್ಷಗಾನ ಕಲಾರಂಗದ ಪರಿಚಯವಾಗಿರುವುದು ನಮ್ಮ ಭಾಗ್ಯ. ಇದನ್ನು ಉಡುಪಿಯ ಶ್ರೀಕೃಷ್ಣನ ಅನುಗ್ರಹವೆಂದೇ ಭಾವಿಸುತ್ತೇವೆ. ನಮ್ಮ ಸಂಪತ್ತಿನ ಹತ್ತನೇ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕೆಂಬುದು ನಮ್ಮ ಸಂಕಲ್ಪ ಎಂದರು. ಡಾ. ಲಕ್ಷ್ಮೀ ಮೂರ್ತಿ ಅವರು ಈ ಸೇವಾ ಅವಕಾಶ ದೊರೆತಿರುವುದಕ್ಕೆ ಧನ್ಯತೆ ವ್ಯಕ್ತಪಡಿಸಿ ಕನ್ನಡದಲ್ಲಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಯು.ಎಸ್. ರಾಜಗೋಪಾಲ ಆಚಾರ್ಯ, ಎಂ.ಎಸ್. ಶ್ರೀಪಾದ, ಇಂದಿರಾ ಎಸ್. ಮೂರ್ತಿ, ಬಾಲಕೃಷ್ಣ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ವಿಜಯ ಕುಮಾರ ಮುದ್ರಾಡಿ, ಭುವನ ಪ್ರಸಾದ ಹೆಗ್ಡೆ, ಸೀತಾರಾಮ ಭಟ್, ಯು. ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ಮರ್ಣೆ ಉಮೇಶ್ ಭಟ್, ಎಲ್ಲೂರು ಗಣೇಶ ರಾವ್, ಆರ್. ವಸಂತ, ಡಾ. ಪ್ರತಿಮಾ ಜೆ. ಆಚಾರ್ಯ, ಸುದರ್ಶನ ಬಾಯರಿ, ಪ್ರಸನ್ನ ಹೆಗಡೆ ಹಾಗೂ ಸಾಮಾಜಿಕ ಕಾರ್ಯಕರ್ತ ಗಿರೀಶ್ ಉಡುಪ ಉಪಸ್ಥಿತರಿದ್ದರು. ನುಕ್ಕೂರು ಮತ್ತು ನಾಲ್ಕೂರು ಸರಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಾದ ಸುಜಾತಾ ಹಾಗೂ ಕೃಷ್ಣ ನಾಯ್ಕ್, ಅಧ್ಯಾಪಕ ವೃಂದ ಮತ್ತು ಯಕ್ಷಶಿಕ್ಷಕ ಮಹೇಶ್ ಮಂದಾರ್ತಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರು ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.


