ಉಡುಪಿ: ನವರಾತ್ರಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರ ಮೇಲೆ ಬೃಹತ್ ಗಾತ್ರದ ಲೈಟ್ ಸೆಟ್ಅಪ್ ಉರುಳಿ ಬಿದ್ದ ಘಟನೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಮೇಲ್ಮಹಡಿಗೆ ನವರಾತ್ರಿ ಉತ್ಸವದ ಪ್ರಯುಕ್ತ ಅಳವಡಿಸಲಾಗಿದ್ದ ಬೃಹತ್ ಲೈಟ್ ಸೆಟ್ಅಪ್, ಏಕಾಏಕಿ ಗಾಳಿ ಬೀಸಿದ ಪರಿಣಾಮ ಕೆಳಗೆ ಉರುಳಿ ಬಿದ್ದಿದೆ.

ಬಿಸಿಲಿನ ಹಿನ್ನೆಲೆಯಲ್ಲಿ ಕಟ್ಟಡದ ನೆರಳಿನಲ್ಲಿ ನಿಂತಿದ್ದ ಮಕ್ಕಳು ಸೇರಿದಂತೆ ಸುಮಾರು 8ರಿಂದ 10 ಮಂದಿ ಭಕ್ತರ ಮೇಲೆ ಲೈಟ್ ಸೆಟ್ಅಪ್ ಬಿದ್ದಿದೆ. ಲೈಟ್ ಬೀಳುತ್ತಿದ್ದಂತೆ ಎಚ್ಚೆತ್ತ ಬಹುತೇಕ ಭಕ್ತರು ತಕ್ಷಣವೇ ಅಲ್ಲಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಓರ್ವ ವಯೋವೃದ್ಧ ಭಕ್ತರ ತಲೆಯ ಮೇಲೆ ಲೈಟ್ ಬಿದ್ದ ಪರಿಣಾಮ ಅವರು ಗಾಯಗೊಂಡು ಮೇಲೇಳಲಾಗದೆ ಒದ್ದಾಡುವಂತಾಯಿತು.

ತಕ್ಷಣ ಸ್ಥಳೀಯರು ಧಾವಿಸಿ ಲೈಟ್ ಸೆಟ್ಅಪ್ ತೆರವುಗೊಳಿಸಿ ಗಾಯಗೊಂಡವರ ನೆರವಿಗೆ ಧಾವಿಸಿದರು. ಸ್ಥಳಕ್ಕೆ 108 ಆರೋಗ್ಯ ಕವಚದ ಸಿಬ್ಬಂದಿ ಆಗಮಿಸಿ ಗಾಯಗೊಂಡ ವೃದ್ಧರಿಗೆ ಚಿಕಿತ್ಸೆ ನೀಡಿದರು. ಘಟನೆಯ ಮಾಹಿತಿ ತಿಳಿದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಈ ಘಟನೆ ಆತಂಕಕ್ಕೆ ಕಾರಣವಾಗಿದೆ.


