ಉಡುಪಿ : ಸಂತೆಕಟ್ಟೆಯಲ್ಲಿ ಅಂಡರ್ಪಾಸ್ ನಿರ್ಮಾಣ ಹಾಗೂ ಸರ್ವಿಸ್ ರಸ್ತೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆಯಡಿ ಪರಿಹಾರ ನೀಡಲಾಗಿರುವ ಅಂಗಡಿಗಳನ್ನು ತೆರವುಗೊಳಿಸಿ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸದಿರುವುದರಿಂದ ಸ್ಥಳೀಯರು, ಉದ್ಯೋಗದಾತರು ಹಾಗೂ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ತುಳುನಾಡು ರಕ್ಷಣಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ. ಭೂಸ್ವಾಧೀನಕ್ಕೆ ಪರಿಹಾರ ನೀಡಲಾಗಿದ್ದರೂ ಅಂಗಡಿಗಳನ್ನು ನೆಲಸಮಗೊಳಿಸದೆ ಇರುವುದು ಹಾಗೂ ಬಸ್ ನಿಲ್ದಾಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದರ ನಡುವೆ ನಗರಸಭೆಯು ನಿಯಮ ಮೀರಿ ಪರಿಹಾರ ಪಡೆದಿರುವ ಅಂಗಡಿ ಮಾಲಕರಿಂದ ಬಾಡಿಗೆ ವಸೂಲಿ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದ್ದು, ಕೂಡಲೇ ಬಾಡಿಗೆ ವಸೂಲಿ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಸ್ವಾಧೀನಪಡಿಸಿಕೊಂಡ ಜಾಗದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ, ಅಲ್ಲಿ ಅಗತ್ಯವಿರುವ ಬಸ್ ನಿಲ್ದಾಣ ಹಾಗೂ ಮೂಲಸೌಕರ್ಯಗಳನ್ನು ನಿರ್ಮಿಸಬೇಕು. ಅಪೂರ್ಣವಾಗಿ ಉಳಿದಿರುವ ಅಂಡರ್ಪಾಸ್ ಹಾಗೂ ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಅವೈಜ್ಞಾನಿಕ ಅಂಡರ್ಪಾಸ್ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದ ವಿರುದ್ಧ ಈ ಹಿಂದೆ ಹಲವು ಹೋರಾಟಗಳನ್ನು ನಡೆಸಿದ್ದ ತುಳುನಾಡು ರಕ್ಷಣಾ ವೇದಿಕೆ, ಇದೀಗ ಕಾಮಗಾರಿಗಳು ಅಪೂರ್ಣವಾಗಿ ಉಳಿದಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದೆ. ಸಂಘಟನೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ (ಅ.7) ಸಂತೆಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಸರ್ವಿಸ್ ರಸ್ತೆ ಬದಿಯಲ್ಲಿ ಬೃಹದಾಕಾರವಾಗಿ ಬೆಳೆದಿರುವ ಹುಲ್ಲುಗಳನ್ನು ತಕ್ಷಣ ಕಟಾವು ಮಾಡಬೇಕು ಎಂದರು.

ಸಂತೆಕಟ್ಟೆಯಿಂದ ಉಡುಪಿಗೆ ತೆರಳುವ ರಸ್ತೆಯ ಎಡಭಾಗದ ಸರ್ವಿಸ್ ರಸ್ತೆಯ ಮೋರಿಯ ಬಳಿ, ಬರೋಡ ಬ್ಯಾಂಕ್ನಿಂದ ರೋಬೋ ಸಾಫ್ಟ್ವರೆಗೆ ಹಾಗೂ ಸರ್ವಿಸ್ ರಸ್ತೆಯ ಚರಂಡಿಯ ಎರಡೂ ಬದಿಗಳಲ್ಲಿ ಹುಲ್ಲು ಬೆಳೆದು ನಿಂತಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ. ವಿಶೇಷವಾಗಿ ರೋಬೋ ಸಾಫ್ಟ್ ಬಳಿ ಬೃಹದಾಕಾರದಲ್ಲಿ ಹುಲ್ಲು ಬೆಳೆದಿದ್ದು, ಸರ್ವಿಸ್ ಬಸ್ಗಳು ಹಾಗೂ ಸಿಟಿ ಬಸ್ಗಳು ಇಲ್ಲಿ ನಿಲುಗಡೆಗೊಳ್ಳುವುದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಪ್ರದೇಶದಲ್ಲಿ ಹಲವು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹೀಗಾಗಿ ಅಪಾಯಕಾರಿಯಾಗಿ ಬೆಳೆದಿರುವ ಹುಲ್ಲುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿತು. ಮಾಸ್ತಿ ಅಮ್ಮ ದೇವಸ್ಥಾನ ಹಾಗೂ ವೆಂಕಟರಮಣ ದೇವಸ್ಥಾನದ ಬಳಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಇದರಿಂದ ದೇವಸ್ಥಾನಗಳಿಗೆ ತೆರಳುವ ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಸಂಘಟನೆ ಗಮನ ಸೆಳೆಯಿತು. ದೇವಸ್ಥಾನಗಳ ಬಳಿ ವಾಹನಗಳ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಂಬಾಗಿಲುವರೆಗೆ ಸ್ಟ್ರೀಟ್ಲೈಟ್ಗಳನ್ನು ಅಳವಡಿಸಬೇಕು. ಈ ಎಲ್ಲ ವಿಚಾರಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಗಮನಹರಿಸಬೇಕು ಎಂದು ತುಳುನಾಡು ರಕ್ಷಣಾ ವೇದಿಕೆ ಆಗ್ರಹಿಸಿದೆ. ಅಪೂರ್ಣ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸದಿದ್ದರೆ ಮುಂದಿನ ಹಂತದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಸುಬ್ರಹ್ಮಣ್ಯ, ಜಿಲ್ಲಾ ಉಪಾಧ್ಯಕ್ಷ ಮನೋಜ್ ಕೆ.ಜಿ. ರೋಡ್, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಕೃಷ್ಣ ಮಾರ್ಪಳ್ಳಿ, ಮುಖಂಡರಾದ ಗೋಪಾಲ್ ನಾಯಕ್, ಸಂತೋಷ್ ಬಂಡಾರಿ, ಬಾಲಚಂದ್ರ ಪೈ ಹಾಗೂ ಶಶಿಧರ ಸಾಲಿಯಾನ್ ಉಪಸ್ಥಿತರಿದ್ದರು.


