Tuesday, October 6, 2026

spot_img

ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಉಡುಪಿ : ಹಿರಿಯ ನಾಗರಿಕರ ಸುರಕ್ಷತೆ, ಘನತೆ ಹಾಗೂ ಉತ್ಪಾದಕ ಜೀವನಕ್ಕೆ ಸರ್ಕಾರ ಜಾರಿಗೊಳಿಸಿರುವ ಕಾಯಿದೆ, ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು. ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯಿದೆ–2007ರಡಿ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರ ನಿರ್ವಹಣೆ ಹಾಗೂ ರಕ್ಷಣಾ ಕಾಯ್ದೆಯನ್ವಯ ಹಿರಿಯ ನಾಗರಿಕರನ್ನು ಮಕ್ಕಳು ಅಥವಾ ಪೋಷಕರು ನಿರ್ಲಕ್ಷಿಸುವುದು, ತ್ಯಜಿಸುವುದು ಕಂಡುಬಂದಲ್ಲಿ ಅಂತಹವರಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 5 ಸಾವಿರದವರೆಗೆ ದಂಡ ವಿಧಿಸಲು ಅವಕಾಶವಿದೆ. ಹಿರಿಯ ನಾಗರಿಕರ ಪಾಲನೆ–ಪೋಷಣೆ ಹಾಗೂ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದ ಅರ್ಜಿಗಳು ನ್ಯಾಯಾಧಿಕರಣದ ಮುಂದೆ ಬಂದಾಗ ಅವುಗಳನ್ನು ಸಕಾಲದಲ್ಲಿ ನ್ಯಾಯಸಮ್ಮತವಾಗಿ ವಿಲೇವಾರಿ ಮಾಡಿ, ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಹಿರಿಯ ನಾಗರಿಕರು, ಅದರಲ್ಲೂ ಒಂಟಿಯಾಗಿ ವಾಸಿಸುವವರ ವಿವರಗಳನ್ನು ಒಳಗೊಂಡ 2,870 ಮಂದಿಯ ಪರಿಷ್ಕೃತ ಪಟ್ಟಿಯನ್ನು ನಿರ್ವಹಿಸಲಾಗುತ್ತಿದೆ. ವಾರಕ್ಕೊಮ್ಮೆ ಬೀಟ್ ಪೊಲೀಸರು ಅವರ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಈ ಕಾರ್ಯವನ್ನು ಪರಿಣಾಮಕಾರಿಯಾಗಿ ಮುಂದುವರಿಸುವುದರೊಂದಿಗೆ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಥಳೀಯ ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಹಿರಿಯ ನಾಗರಿಕರು ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಮಕ್ಕಳು ಅಥವಾ ಸಂಬಂಧಿಕರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ ಬಳಿಕ, ಅವರು ಹಿರಿಯರನ್ನು ಪಾಲನೆ ಮಾಡದಿರುವ ಪ್ರಕರಣಗಳು ಕಂಡುಬರುತ್ತಿವೆ. ಕೆಲ ಸಂದರ್ಭಗಳಲ್ಲಿ ವಂಚನೆಯಿಂದ ದಾಖಲೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ದಸ್ತಾವೇಜುಗಳನ್ನು ಅಸಿಂಧು ಎಂದು ಘೋಷಿಸಿ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದ್ದು, ಈ ಕುರಿತು ಹಿರಿಯ ನಾಗರಿಕರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸರ್ಕಾರ ಹಿರಿಯ ನಾಗರಿಕರಿಗಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ನೀತಿ–ನಿಯಮಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಶಾಲಾ–ಕಾಲೇಜುಗಳಲ್ಲಿ ಹಿರಿಯರು ಮತ್ತು ಯುವಜನರ ನಡುವಿನ ಬಾಂಧವ್ಯ, ಹಿರಿಯರ ಗೌರವ ಹಾಗೂ ಉತ್ತಮ ಮೌಲ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅರ್ಹ ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಅಧಿಕಾರಿಗಳು ಖಾತರಿಪಡಿಸಬೇಕು ಎಂದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃದ್ಧಾಶ್ರಮಗಳು ಸರ್ಕಾರದ ಮಾರ್ಗಸೂಚಿ ಹಾಗೂ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಆಗಿಂದಾಗ್ಗೆ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹಿರಿಯ ನಾಗರಿಕರ ಸಹಾಯವಾಣಿ 1090ಕ್ಕೆ ನೆರವು ಕೋರಿ ಕರೆ ಮಾಡುವ ಹಿರಿಯರಿಗೆ ಕೇಂದ್ರದ ಸಿಬ್ಬಂದಿ ತ್ವರಿತ ಹಾಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಯಾವ ರೀತಿಯ ಸಮಸ್ಯೆಗಳ ಕುರಿತು ಹೆಚ್ಚಿನ ದೂರುಗಳು ದಾಖಲಾಗುತ್ತಿವೆ ಎಂಬುದನ್ನು ವಿಶ್ಲೇಷಿಸಿ, ಆ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ ಆರಂಭಿಸಲು ಸಲ್ಲಿಕೆಯಾಗಿರುವ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸಾಕಷ್ಟು ಜಾಗ, ಅಗತ್ಯ ಮೂಲಸೌಕರ್ಯ, ಸಿಬ್ಬಂದಿ, ಶುಶ್ರೂಷಕರು ಹಾಗೂ ವೈದ್ಯಕೀಯ ಸೌಲಭ್ಯ ಸೇರಿದಂತೆ ಹಿರಿಯ ನಾಗರಿಕರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿರುವವರಿಗೆ ಮಾತ್ರ ಕೇಂದ್ರ ಆರಂಭಿಸಲು ಅನುಮತಿ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮೀಷನರ್ ರಶ್ಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಡಿಎಚ್‌ಒ ಡಾ. ಬಸವರಾಜ್ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles