ಉಡುಪಿ: ಸ್ವಚ್ಛತಾ ಸೇವಾ ಅಭಿಯಾನ-2026 ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರೈಲ್ವೆ ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳ ಸ್ವಚ್ಛತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು.

ಉಡುಪಿ, ಬೈಂದೂರಿನ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಹಾಗೂ ಮುರುಡೇಶ್ವರ ರೈಲ್ವೆ ನಿಲ್ದಾಣಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಸ್ವಚ್ಛತೆಯ ಮಹತ್ವವನ್ನು ಸಾರಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಹುಲಿವೇಷ ಪ್ರದರ್ಶನವೂ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ನ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ಮತ್ತು ಡಾ. ಶುಭಾ, ಸಹಾಯಕ ಪ್ರಾಧ್ಯಾಪಕರಾದ ಡಾ. ಕಾರ್ತಿಕೇಯ ಗೋಸ್ವಾಮಿ ಹಾಗೂ ಚಂದನ್ ಕುಮಾರ್ ಮತ್ತು ವಿದ್ಯಾರ್ಥಿಗಳನ್ನು ಕಾರವಾರ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಸ್ವಾಗತಿಸಿದರು.

ಡಾ. ಸುಬ್ರಹ್ಮಣ್ಯ ಭಟ್ ಅವರು ಉಡುಪಿಯ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತು ಮಾಹಿತಿ ನೀಡಿದರು. ಪ್ರವಾಸಿ ತಾಣಗಳು ಹಾಗೂ ಐತಿಹಾಸಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವ ಅಗತ್ಯದ ಕುರಿತು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕಾರವಾರ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.


