Sunday, September 27, 2026

spot_img

ಉಳ್ತೂರಿನಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಮತ್ತೆ ವಿರೋಧ: ನೂರಾರು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಉಡುಪಿ: ಕುಂದಾಪುರ ತಾಲೂಕಿನ ಉಳ್ತೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮಲತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯ ಗ್ರಾಮಸ್ಥರಿಂದ ಮತ್ತೆ ತೀವ್ರ ವಿರೋಧ ವ್ಯಕ್ತವಾಗಿದೆ. ಘಟಕ ನಿರ್ಮಾಣ ಕಾಮಗಾರಿ ಪುನರಾರಂಭಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾನುವಾರ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು, ಗ್ರಾಮದ ಸೌಂದರ್ಯ ಕಾಪಾಡಿ’ ಎಂಬ ಫಲಕಗಳನ್ನು ಪ್ರದರ್ಶಿಸಿ, ಮಲತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯು ಈ ಹಿಂದೆ ಉಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಖರೀದಿಸಿ, ಅಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಉದ್ದೇಶಿಸಿತ್ತು. ಆದರೆ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವಂತೆ ಎನ್‌ಜಿಟಿ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶವಿರುವ ಹಿನ್ನೆಲೆಯಲ್ಲಿ, ಅದೇ ಜಾಗದಲ್ಲಿ ಘಟಕ ನಿರ್ಮಾಣಕ್ಕೆ ಮುಂದಾಗಿದೆ.

ಘಟಕ ನಿರ್ಮಾಣಕ್ಕಾಗಿ ಮರಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಅಧಿಕಾರಿಗಳು ಘಟಕದ ಕುರಿತು ಮಾಹಿತಿ ನೀಡಿದರೂ, ಯಾವುದೇ ಕಾರಣಕ್ಕೂ ಇಲ್ಲಿ ಘಟಕ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ ಕಳೆದ ಎರಡು ದಿನಗಳಿಂದ ಜೆಸಿಬಿ ಬಳಸಿ ಮತ್ತೆ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಭಾನುವಾರ ಕಾಮಗಾರಿ ಪುನರಾರಂಭವಾಗಲಿದೆ ಎಂಬ ಮಾಹಿತಿ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಮಗಾರಿ ಗುತ್ತಿಗೆ ಪಡೆದಿರುವ ಈಶ ಕನ್ಸ್ಟ್ರಕ್ಷನ್ಸ್‌ನ ಗುತ್ತಿಗೆದಾರ ಶ್ರೀನಿವಾಸ್ ಗೌಡ ಅವರನ್ನು ಸ್ಥಳಕ್ಕೆ ಕರೆಸಿ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಈ ಹಿಂದೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿಯೂ ವ್ಯಾಜ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಮಗಾರಿ ಮುಂದುವರಿಸುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಉಳ್ತೂರು ಗ್ರಾಮವು ಕುಂದಾಪುರ ತಾಲೂಕಿಗೆ ಸೇರಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿದೆ. ಹೀಗಿರುವಾಗ ಬೇರೆ ತಾಲೂಕಿಗೆ ಸೇರಿದ ಪಟ್ಟಣ ಪಂಚಾಯಿತಿಯ ಮಲತ್ಯಾಜ್ಯವನ್ನು ಉಳ್ತೂರಿನಲ್ಲಿ ತಂದು ವಿಲೇವಾರಿ ಮಾಡುವುದು ಎಷ್ಟು ಸಮಂಜಸ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಸ್ಥಳೀಯರ ವಿರೋಧವನ್ನು ಕಡೆಗಣಿಸಿ ಕಾಮಗಾರಿ ನಡೆಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಗ್ರಾಮ ಪಂಚಾಯಿತಿಯ ಅನುಮತಿ ಪಡೆಯದೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದರು.

ಗ್ರಾಮಸ್ಥರ ಪ್ರತಿಭಟನೆ ಹಾಗೂ ಆಕ್ಷೇಪಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಗುತ್ತಿಗೆದಾರ ಶ್ರೀನಿವಾಸ್ ಗೌಡ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles