Wednesday, September 23, 2026

spot_img

ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

ಉಡುಪಿ : ಜಿಲ್ಲೆಯ ಎಲ್ಲ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ರಸ್ತೆ ಅಭಿವೃದ್ಧಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಪಘಾತ ತಡೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಹಾಗೂ ಹೊರವಲಯಗಳಲ್ಲಿ ನಿಗದಿಪಡಿಸಿರುವ ವೇಗದ ಮಿತಿಯನ್ನು ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂದರು.

ಜಿಲ್ಲೆಯಲ್ಲಿ 6 ಮತ್ತು ಅದಕ್ಕಿಂತ ಹೆಚ್ಚು ಚಕ್ರಗಳ 3,785 ಸರಕು ಸಾಗಣೆ ವಾಹನಗಳಿದ್ದು, ಈ ಪೈಕಿ 1,952 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲಾಗಿದೆ. ಉಳಿದ ವಾಹನಗಳಿಗೂ ಒಂದು ತಿಂಗಳೊಳಗೆ ಸೀಡ್ ಗವರ್ನರ್ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಓವರ್‌ಲೋಡ್‌ನಿಂದ ಕಾಂಕ್ರೀಟ್ ಹಾಗೂ ಮರಳು ರಸ್ತೆಗೆ ಬೀಳುತ್ತಿರುವುದು ಮತ್ತು ಇದರಿಂದ ಅಪಘಾತ ಹಾಗೂ ರಸ್ತೆ ಹಾನಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ ತೀವ್ರಗೊಳಿಸುವಂತೆ ಸೂಚಿಸಿದರು. ಕಳೆದ ಮೂರು ತಿಂಗಳಲ್ಲಿ 1,569 ವಾಹನಗಳನ್ನು ತಪಾಸಣೆ ನಡೆಸಿ, 15 ಪ್ರಕರಣ ದಾಖಲಿಸಲಾಗಿದ್ದು, 3.33 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಉಡುಪಿ ನಗರಸಭಾ ವ್ಯಾಪ್ತಿಯ ರಸ್ತೆ ಬದಿಯ ಅನಧಿಕೃತ ಗೂಡಂಗಡಿ, ಫಾಸ್ಟ್‌ಫುಡ್ ಸೆಂಟರ್ ಹಾಗೂ ತಳ್ಳುಗಾಡಿಗಳನ್ನು ಗುರುತಿಸಿರುವ ಆರು ವೆಂಡಿಂಗ್ ಝೋನ್‌ಗಳಿಗೆ ಸ್ಥಳಾಂತರಿಸಿ, ಅಲ್ಲಿ ಶೆಲ್ಟರ್‌ಗಳನ್ನು ಶೀಘ್ರ ನಿರ್ಮಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಕಲ್ಸಂಕ ಹಾಗೂ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು, ನಗರದ ಉಳಿದ ಪ್ರಮುಖ ಜಂಕ್ಷನ್‌ಗಳಲ್ಲಿಯೂ ಸಿಗ್ನಲ್ ವ್ಯವಸ್ಥೆ ಕಲ್ಪಿಸಬೇಕು. ಪಡುಬಿದ್ರೆ, ಕೋಟ, ಬ್ರಹ್ಮಾವರ ಹಾಗೂ ಕುಂದಾಪುರದ ಪ್ರಮುಖ ಜಂಕ್ಷನ್‌ಗಳಲ್ಲಿಯೂ ಸಿಗ್ನಲ್ ಲೈಟ್ ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಶಾಲಾ-ಕಾಲೇಜುಗಳ ಸುತ್ತಮುತ್ತ ಸೂಚನಾ ಫಲಕ, ವೇಗತಡೆ, ಬ್ಯಾರಿಕೇಡ್, ಜೀಬ್ರಾ ಕ್ರಾಸಿಂಗ್ ಹಾಗೂ ಬೀದಿ ದೀಪ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕು. ಅಪಘಾತ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಿಗೆ ಎರಡು ತಿಂಗಳೊಳಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಿರುವುದನ್ನು ಖಚಿತಪಡಿಸಿ ವರದಿ ಸಲ್ಲಿಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು. ಬಸ್‌ಗಳಲ್ಲಿ ಕಸದ ಬುಟ್ಟಿ ಅಳವಡಿಸಿ, ಪ್ರಯಾಣಿಕರು ರಸ್ತೆಗೆ ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕವೂ ತೆರೆದಿರುವ ರಸ್ತೆ ವಿಭಜಕಗಳನ್ನು ಮುಚ್ಚಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ವಿಭಜಕಗಳನ್ನು ನಿರ್ಮಿಸಲು ಪೊಲೀಸ್ ಹಾಗೂ ಸಂಬಂಧಿತ ಎಂಜಿನಿಯರ್‌ಗಳು ಜಂಟಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles