ಉಡುಪಿ: ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿ ಪ್ರಕಾಶ್ ಅವರ ಭೀಕರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮೃತರ ಕುಟುಂಬ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಮಾಹಿತಿ ನೀಡಿದು. ಅಲ್ಲದೆ, ಮೃತದೇಹವನ್ನು ಶಾರ್ಜಾದಿಂದ ಭಾರತಕ್ಕೆ ತ್ವರಿತವಾಗಿ ತರಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಮನವಿ ಸಲ್ಲಿಸಿದ್ದಾರೆ. ಕುಟುಂಬದ ಮನವಿಗೆ ಸ್ಪಂದಿಸಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದು, ಕಾನೂನು ಪ್ರಕ್ರಿಯೆಯಡಿ ಮೃತದೇಹವನ್ನು ತುರ್ತಾಗಿ ಭಾರತಕ್ಕೆ ತರಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಮೃತದೇಹವನ್ನು ತುಂಡುಗಳಾಗಿ ಬೇರ್ಪಡಿಸಿ ಚೀಲಗಳಲ್ಲಿ ತುಂಬಿ ಕಾರಿನ ಡಿಕ್ಕಿಯಲ್ಲಿ ಇರಿಸಿ, ಬಳಿಕ ವಿಮಾನ ನಿಲ್ದಾಣದ ಬಳಿ ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದ ಸ್ಥಿತಿಗೆ ಸಂಬಂಧಿಸಿದ ಗಂಭೀರ ಅಂಶಗಳು ಉಲ್ಲೇಖವಾಗಿವೆ ಎನ್ನಲಾಗಿದೆ.

ಪ್ರಕಾಶ್ ಅವರ ಹತ್ಯೆಯ ಬಳಿಕ ಅವರ ಪತ್ನಿ ಟೀನಾ ಹಾಗೂ ಪುತ್ರನ ಸಂಪರ್ಕವೂ ಕಡಿತಗೊಂಡಿದ್ದು, ಅವರು ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಕಾಶ್ ಅವರ ಬ್ಯಾಂಕ್ ಖಾತೆಯಿಂದ ಹಣ ವಿತ್ಡ್ರಾ ಆಗಿರುವ ವಿಚಾರವೂ ಕುಟುಂಬದ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಪ್ರಕಾಶ್ ಅವರ ಸಾವಿನ ಹಿನ್ನೆಲೆಯಲ್ಲಿ ಪತ್ನಿ ಟೀನಾ ಅವರ ನಾಪತ್ತೆ ಹಾಗೂ ಬ್ಯಾಂಕ್ ಖಾತೆಯಿಂದ ಹಣ ವಿತ್ಡ್ರಾ ಆಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಹತ್ಯೆಯಲ್ಲಿ ಪತ್ನಿಯ ಪಾತ್ರದ ಕುರಿತು ಯಾವುದೇ ಅಧಿಕೃತ ದೃಢೀಕರಣವಾಗಿಲ್ಲ. ಪ್ರಕರಣದ ತನಿಖೆ ಶಾರ್ಜಾ ಪೊಲೀಸರಿಂದ ಮುಂದುವರಿದಿದೆ.


