ಉಡುಪಿ: ಬಸ್ ಸಮಯದ ವಿಚಾರವಾಗಿ ಇಬ್ಬರು ಬಸ್ ಕಂಡಕ್ಟರ್‌ಗಳು ಪರಸ್ಪರ ಜಗಳವಾಡಿಕೊಂಡು, ಸಾರ್ವಜನಿಕ ಸ್ಥಳದಲ್ಲಿ ಬಸ್ಸುಗಳನ್ನು ಅಡ್ಡ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಸೆ.20ರಂದು ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅಬ್ದುಲ್ ಬಶೀರ್ ಅವರಿಗೆ ಸರ್ವಿಸ್ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ, ಎರಡು ಬಸ್‌ಗಳನ್ನು ಅಡ್ಡ ನಿಲ್ಲಿಸಿಕೊಂಡು ಇಬ್ಬರು ಪರಸ್ಪರ ದೂಡಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವುದರ ಜೊತೆಗೆ ಭಯ ಹಾಗೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಪೊಲೀಸರು ಗಲಾಟೆ ಮಾಡದಂತೆ ತಿಳುವಳಿಕೆ ನೀಡಿದರೂ ಇಬ್ಬರೂ ಸಿಬ್ಬಂದಿಯ ಎದುರಿನಲ್ಲೇ ಮತ್ತೆ ಪರಸ್ಪರ ಬೈದಾಡಿಕೊಂಡು ಕೈಕೈ ಮಿಲಾಯಿಸಿ ಹೊಡೆದಾಡಲು ಮುಂದಾಗಿದ್ದಾರೆ. ತಕ್ಷಣ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಗಲಾಟೆ ನಿಯಂತ್ರಿಸಿದ್ದಾರೆ. ವಿಚಾರಣೆ ವೇಳೆ ಮೊದಲನೇ ವ್ಯಕ್ತಿ ಮೊಹಮ್ಮದ್ ಮುಝಮ್ಮಿಲ್ (21), ನವದುರ್ಗಾ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಎರಡನೇ ವ್ಯಕ್ತಿ ಅಬ್ದುಲ್ ಹಮೀದ್ (50), ಶ್ರೀ ದುರ್ಗಾಂಬ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಬಸ್‌ಗಳ ಸಮಯದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಬಸ್ಸುಗಳನ್ನು ನಿಲ್ಲಿಸಿ ಗಲಾಟೆ ಮಾಡಿದ್ದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


