ಉಡುಪಿ : ಮಣಿಪಾಲದ ಡಬ್ಲ್ಯುಜಿಎಸ್ಎಚ್ಎ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಸಾಯಿ ಸಂಜಯ್ ಬಿಂಗಾರೆ (21) ಎಂಬಾತನನ್ನು ಸೆ.9ರಂದು ಬಂಧಿತ ಆರೋಪಿ.

ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರ ಪುತ್ರಿ ಪೌಲಾ ಲೆಸ್ಲಿ ವಾರ್ಜ್ರಿ (20) ಅವರು 2025ರ ನವೆಂಬರ್ 7ರಂದು ರಾತ್ರಿ 11.45ರಿಂದ ನವೆಂಬರ್ 8ರಂದು ಬೆಳಿಗ್ಗೆ 8.40ರ ನಡುವಿನ ಅವಧಿಯಲ್ಲಿ ಮಣಿಪಾಲದ ಕಾಯಿನ್ ಸರ್ಕಲ್ ಸಮೀಪದ ಐರಿಸ್ ಪ್ಲಾಜಾ ಕಟ್ಟಡದ 504ನೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿದ ಬಳಿಕ, ಮೃತ ಪಟ್ಟವಳ ಬಳಿಯಿದ್ದ ಆ್ಯಪಲ್ ಐಪ್ಯಾಡ್, ಐಫೋನ್, ದಿನಚರಿ ಸೇರಿದಂತೆ ಡಿಜಿಟಲ್ ದಾಖಲೆಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ಮೃತಪಟ್ಟವಳ ತಂದೆ ಈ ದಾಖಲೆಗಳನ್ನು ಪರಿಶೀಲಿಸಿದಾಗ ಸಾಯಿ ಭಿಂಗಾರೆ ಅಲಿಯಾಸ್ ಸಾಯಿ ಪಾಟೀಲ್ ಎಂಬಾತನೊಂದಿಗೆ ಸ್ನ್ಯಾಪ್ಚಾಟ್ ಮೂಲಕ ನಡೆದಿದ್ದ ಸಂವಹನ ಹಾಗೂ ಇತರ ದಾಖಲೆಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಮೃತಳಿಗೆ ನಿರಂತರ ಕಿರುಕುಳ ನೀಡುವುದು, ಬಲವಂತಪಡಿಸುವುದು ಅಥವಾ ಬೆದರಿಸಿ ಹಣ ಅಥವಾ ಇತರ ಪ್ರಯೋಜನ ಪಡೆಯಲು ಒತ್ತಡ ಹೇರುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಸಾಧ್ಯತೆಯಿದೆ ಎಂದು ಆರೋಪಿಸಿ ಮೃತಳ ತಂದೆ ನ್ಯಾಯಾಲಯದ ಮೂಲಕ ಖಾಸಗಿ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಸೂಚನೆಯಂತೆ ಪಿಎಸ್ಐ ತಿಮ್ಮೇಶ್ ಬಿ.ಎನ್. ಅವರು ತನಿಖೆ ನಡೆಸಿ, ದಾದ್ರ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ನಿವಾಸಿ, ಸಂಜಯ್ ಬಿಂಗಾರೆ ಅವರ ಪುತ್ರ ಸಾಯಿ ಸಂಜಯ್ ಬಿಂಗಾರೆ (21) ಎಂಬಾತನನ್ನು ಸೆ.9ರಂದು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


