ಉಡುಪಿ : ತೆಂಕುತಿಟ್ಟಿನ ಹಿರಿಯ ಹಾಗೂ ಸಮರ್ಥ ಯಕ್ಷಗಾನ ಕಲಾವಿದ ಎಂ.ಟಿ.ಎಸ್. ಕುಲಾಲ್ (79) ಅವರು ಸೋಮವಾರ ನಿಧನರಾದರು. ಅವರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸೋದರಮಾವ ಬೇತಕುಂಞಿ ಕುಲಾಲ್ ಅವರಲ್ಲಿ ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದ್ದ ಎಂ.ಟಿ.ಎಸ್. ಕುಲಾಲ್ ಅವರು ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಕುಂಬ್ಳೆ, ಬಪ್ಪನಾಡು ಹಾಗೂ ಕಟೀಲು ಮೇಳಗಳಲ್ಲಿ ಸುಮಾರು ಆರು ದಶಕಗಳ ಕಾಲ ಕಲಾಸೇವೆ ಸಲ್ಲಿಸಿದ್ದರು.

ಯಕ್ಷಗಾನದ ವಿವಿಧ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದ ಅವರು ರಾಜವೇಷ, ಪೋಷಕ ವೇಷ, ಸ್ತ್ರೀವೇಷ ಹಾಗೂ ಹಾಸ್ಯ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು. ಭಾಗವತಿಕೆಯಲ್ಲೂ ಪರಿಣತಿ ಪಡೆದಿದ್ದ ಅವರು ಕಲೆಯ ವಿವಿಧ ಆಯಾಮಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇಳಿ ವಯಸ್ಸಿನಲ್ಲಿಯೂ ಯಕ್ಷಗಾನ ಕ್ಷೇತ್ರದೊಂದಿಗಿನ ತಮ್ಮ ನಂಟನ್ನು ಮುಂದುವರಿಸಿದ್ದ ಕುಲಾಲ್ ಅವರು ಮೇಳದ ಪ್ರತಿನಿಧಿಯಾಗಿ ಕಲಾರಂಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಪ್ರತಿವರ್ಷ ನಡೆಯುತ್ತಿದ್ದ ಯಕ್ಷನಿಧಿ ಸಮಾವೇಶಕ್ಕೂ ತಪ್ಪದೆ ಹಾಜರಾಗುತ್ತಿದ್ದರು. ಕಟೀಲು ಮೇಳದ ಅಭಿಮಾನಿಗಳು ತಿಂಗಳ ಹಿಂದಷ್ಟೇ ಅವರ ಮನೆಗೆ ತೆರಳಿ ಹಿರಿಯ ಕಲಾವಿದರನ್ನು ಗೌರವಿಸಿದ್ದರು. ಯಕ್ಷಗಾನ ಕಲಾರಂಗ ಸಂಸ್ಥೆಯ ವತಿಯಿಂದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಳೆದ ವರ್ಷ ಸಂಸ್ಥೆಯ 50 ಸಾವಿರ ನಿಧಿಯನ್ನೊಳಗೊಂಡ ಸುವರ್ಣ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದರು.

ಹಿರಿಯ ಕಲಾವಿದ ಎಂ.ಟಿ.ಎಸ್. ಕುಲಾಲ್ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರ ಹಿರಿಯ ಕಲಾಸಾಧಕನೊಬ್ಬರನ್ನು ಕಳೆದುಕೊಂಡಂತಾಗಿದೆ.


