ಉಡುಪಿ: ಪಶ್ಚಿಮ ಕರಾವಳಿಯಲ್ಲಿ ಕಡಲ ಅಬ್ಬರ ಮುಂದುವರಿದಿರುವ ಬೆನ್ನಲ್ಲೇ, ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಬುಧವಾರ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಕುಂಭಾಶಿ ಕೊರವಡಿಯ ಸಂತೋಷ್ ಎ. ಅವರಿಗೆ ಸೇರಿದ ಮಂಜುನಾಥ ಸಾಗರ ಹೆಸರಿನ ತ್ರಿಸೆವೆಂಟಿ ಬೋಟ್ ಅಪಾಯಕ್ಕೆ ಸಿಲುಕಿದ್ದು, ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರೆ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬುಧವಾರ ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್, ಅಳಿವೆ ಪ್ರದೇಶ ತಲುಪುತ್ತಿದ್ದಂತೆ ನೀರು ಒಳನುಗ್ಗಿ ಮುಳುಗಲು ಆರಂಭಿಸಿತು. ಬೋಟ್ ಅಪಾಯದಲ್ಲಿರುವ ಮಾಹಿತಿ ತಿಳಿಯುತ್ತಿದ್ದಂತೆ ಇತರೆ ಮೀನುಗಾರರು ಪರ್ಸಿನ್ ಬೋಟ್ಗಳ ಮೂಲಕ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬೋಟ್ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಇತರೆ ಬೋಟ್ಗಳಿಗೆ ಸ್ಥಳಾಂತರಿಸಲಾಯಿತು. ನಂತರ ನೀರಿನಲ್ಲಿ ಭಾಗಶಃ ಮುಳುಗಿದ್ದ ‘ಮಂಜುನಾಥ ಸಾಗರ’ ಬೋಟ್ನ್ನು ಮತ್ತೊಂದು ಬೋಟ್ನ ಸಹಾಯದಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಯಿತು. ಬೋಟ್ ಮುಳುಗಡೆಯಾದ ಪರಿಣಾಮ ಅದರಲ್ಲಿದ್ದ ಮೀನುಗಾರಿಕಾ ಬಲೆಗಳು ಹಾಗೂ ಇತರೆ ಸಲಕರಣೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಗಂಗೊಳ್ಳಿ ಅಳಿವೆ ಹಾಗೂ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ಗಳು ಅಪಾಯಕ್ಕೆ ಸಿಲುಕುತ್ತಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ವಾರ ಇದೇ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಪರ್ಸಿನ್ ಬೋಟ್ವೊಂದು ಸಂಪೂರ್ಣ ಮುಳುಗಡೆಯಾಗಿತ್ತು. ಇದೀಗ ವಾರದೊಳಗೆ ಮತ್ತೊಂದು ಬೋಟ್ ಮುಳುಗಡೆಯಾಗಿರುವುದು ಮೀನುಗಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಹಾಗೂ ಕಡಲ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೀನುಗಾರರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.



