ಉಡುಪಿ : ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ರೊಟೇರಿಯನ್ ತಿಮ್ಮ ಪೂಜಾರಿ ಅವರನ್ನು ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3182ರ ವಲಯ-2ರ ಸಹಾಯಕ ಗವರ್ನರ್ ಆಗಿ 2027-28ನೇ ಸಾಲಿನ ರೋಟರಿ ವರ್ಷಕ್ಕೆ ನೇಮಕ ಮಾಡಲಾಗಿದೆ. ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3182ರ 2027-28ನೇ ಸಾಲಿನ ಜಿಲ್ಲಾ ಗವರ್ನರ್ ಪಿ.ಎಚ್.ಎಸ್.ಎಂ. ರೊಟೇರಿಯನ್ ವಸಂತ್ ಹೋಬಳಿದಾರ್ ಅವರು ರೊಟೇರಿಯನ್ ತಿಮ್ಮ ಪೂಜಾರಿ ಅವರ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ರೋಟರಿ ಸಂಸ್ಥೆಗೆ ಅವರು ಸಲ್ಲಿಸಿರುವ ಸೇವೆ, ನಾಯಕತ್ವ ಗುಣಗಳು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೋರಿರುವ ಬದ್ಧತೆಯನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ. ಸಹಾಯಕ ಗವರ್ನರ್ ಆಗಿ ತಿಮ್ಮ ಪೂಜಾರಿ ಅವರು ಜಿಲ್ಲಾ ಗವರ್ನರ್ ತಂಡ ಮತ್ತು ವಲಯ-2ಕ್ಕೆ ಒಳಪಡುವ ರೋಟರಿ ಕ್ಲಬ್ಗಳ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ಲಬ್ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗಳಿಗೆ ವಾರ್ಷಿಕ ಗುರಿ ಸಾಧನೆಗೆ ಮಾರ್ಗದರ್ಶನ ನೀಡುವುದು, ಸದಸ್ಯತ್ವ ವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ರೋಟರಿ ಫೌಂಡೇಶನ್ಗೆ ಕೊಡುಗೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದು ಅವರ ಪ್ರಮುಖ ಜವಾಬ್ದಾರಿಗಳಾಗಿವೆ.

ಜಿಲ್ಲಾ ನಾಯಕತ್ವ ಮತ್ತು ಕ್ಲಬ್ಗಳ ನಡುವೆ ಸಮರ್ಪಕ ಸಂವಹನ ಕಲ್ಪಿಸುವುದು, ಜಿಲ್ಲಾ ಗವರ್ನರ್ ಅವರ ಅಧಿಕೃತ ಕ್ಲಬ್ ಭೇಟಿಗಳನ್ನು ಸಂಯೋಜಿಸುವುದು, ವಲಯ ಮಟ್ಟದ ಕಾರ್ಯಕ್ರಮಗಳು ಹಾಗೂ ಜಂಟಿ ಕ್ಲಬ್ ಸಭೆಗಳಿಗೆ ಸಹಕಾರ ನೀಡುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಅವರು ನಿರ್ವಹಿಸಲಿದ್ದಾರೆ.ಅಲ್ಲದೆ, ವಲಯ ಹಾಗೂ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮಗಳು, ಸೆಮಿನಾರ್ಗಳು, ಅಸೆಂಬ್ಲಿಗಳು, ವಿವಿಧ ಸೇವಾ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವುಗಳ ಯಶಸ್ಸಿಗೆ ಸಹಕರಿಸುವ ಹೊಣೆಗಾರಿಕೆಯೂ ಅವರ ಮೇಲಿದೆ.

ತಿಮ್ಮ ಪೂಜಾರಿ ಅವರ ಅನುಭವ ಹಾಗೂ ಮಾರ್ಗದರ್ಶನವು ವಲಯ-2ರ ರೋಟರಿ ಕ್ಲಬ್ಗಳಿಗೆ ಸ್ಫೂರ್ತಿ ನೀಡಿ, ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ‘ಸೇವೆಯೇ ಶ್ರೇಷ್ಠ’ ಎಂಬ ರೋಟರಿಯ ಧ್ಯೇಯದೊಂದಿಗೆ ತಿಮ್ಮ ಪೂಜಾರಿ ಅವರು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿ ಎಂದು ಶುಭ ಹಾರೈಸಿದ್ದಾರೆ.


