ಉಡುಪಿ : ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯನ್ನು ತೋರಿಸುತ್ತದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಓಲೈಕೆಗಾಗಿ ಹಿಂದುತ್ವ, ಸನಾತನ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳನ್ನು ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸನಾತನ ಧರ್ಮಕ್ಕೆ ಅಪಮಾನ ಮಾಡುವುದನ್ನು ಸಮಾಜ ಸಹಿಸುವುದಿಲ್ಲ ಎಂದರು.

‘ಬಸವರಾಜ ರಾಯರೆಡ್ಡಿಯವರೇ, ನೀವು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಿಮ್ಮನ್ನು ಬೀಳ್ಕೊಡಲು ನಾವು ಸಿದ್ಧರಿದ್ದೇವೆ. ಹಜ್ಗೆ ಹೋಗುತ್ತೀರೋ, ಬೇರೆಡೆಗೆ ಹೋಗುತ್ತೀರೋ ಹೋಗಿ ಬನ್ನಿ. ಆದರೆ ಅದರ ನೆಪದಲ್ಲಿ ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಅಪಮಾನ ಮಾಡಬೇಡಿ’ ಎಂದು ಸುನಿಲ್ ಕುಮಾರ್ ಹೇಳಿದರು.

ಗಣೇಶೋತ್ಸವ, ನವರಾತ್ರಿ ಸೇರಿದಂತೆ ಯಾವುದೇ ಧಾರ್ಮಿಕ ಉತ್ಸವಗಳಿಗೆ ವಿನಾಕಾರಣ ತೊಂದರೆ ನೀಡಬಾರದು. ಧಾರ್ಮಿಕ ಚಟುವಟಿಕೆಗಳಿಗೆ ಅಡೆತಡೆ ಮಾಡುವ ಮೊದಲು ಸರ್ಕಾರ ನೂರು ಬಾರಿ ಯೋಚಿಸಬೇಕು ಎಂದು ಅವರು ಎಚ್ಚರಿಸಿದರು. ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆ ನೀಡುತ್ತೀರಾದರೆ ನಿಮ್ಮ ಅವನತಿ ಗಣೇಶೋತ್ಸವದ ಮೂಲಕವೇ ಆಗಲಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಸುನಿಲ್ ಕುಮಾರ್ ಹೇಳಿದರು. ಮುಸ್ಲಿಂ ಓಲೈಕೆಯ ನೆಪದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳು ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯಬಾರದು. ಇಲ್ಲವಾದಲ್ಲಿ ಸರ್ಕಾರವೇ ಭಸ್ಮವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.


