ಉಡುಪಿ: ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಅನುಜ್ ಪಾಟೀಲ್(35) ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ ಘಟನೆ ಹೆಬ್ರಿ ತಾಲೂಕಿನ ಬಳಿ ಇಂದು ಮುಂಜಾನೆ ನಡೆದಿದೆ.

ಆ.7ರಂದು ಮುದರಂಗಡಿಯಲ್ಲಿ ನಡೆದ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅನುಜ್ ಪಾಟೀಲ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದರು. ಡೇವಿಡ್ ಹತ್ಯೆ ಮಾಡಲು ಶೂಟರ್‌ಗಳನ್ನು ಕಳುಹಿಸಿಕೊಟ್ಟಿದ್ದ ಆರೋಪ ಅನುಜ್ ಪಾಟೀಲ್ ಮೇಲಿದ್ದು, ತನಿಖೆಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು ಎನ್ನಲಾಗಿದೆ.

ಸೋಮವಾರ ಮುಂಜಾನೆ ಆರೋಪಿಯನ್ನು ಪೊಲೀಸರು ಹೆಬ್ರಿ ಸಮೀಪ ಕರೆದೊಯ್ಯುತ್ತಿದ್ದ ವೇಳೆ, ಮೂತ್ರ ವಿಸರ್ಜನೆಗಾಗಿ ವಾಹನದಿಂದ ಕೆಳಗಿಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡ ಅನುಜ್ ಪಾಟೀಲ್ ಕೊಲ್ಲೂರು ಎಸೈ ವಿನಯ್ ಕೊರ್ಲಹಳ್ಳಿ ಬಳಿಯಿದ್ದ ಸರ್ವಿಸ್ ಪಿಸ್ತೂಲ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಆತನನ್ನು ತಡೆಯಲು ಪೊಲೀಸರು ಮುಂದಾದಾಗ, ಅನುಜ್ ಪಾಟೀಲ್ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಎಸೈ ನಂಜಾ ನಾಯಕ್ ಅವರು ಸರ್ವಿಸ್ ಪಿಸ್ತೂಲ್‌ನಿಂದ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಅನುಜ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಮೋಹನ್ ಹಾಗೂ ಕಾನ್‌ಸ್ಟೆಬಲ್ ಶ್ಯಾಮ್ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಆರೋಪಿ
ಅನುಜ್ ಪಾಟೀಲ್ ನಾಲ್ಕು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದು, ಕೊಲೆ ಮಾಡಲು ಸುಪಾರಿ ನೀಡುವುದು, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಶೂಟರ್‌ಗಳನ್ನು ಒದಗಿಸುವಲ್ಲಿ ಅನುಜ್ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ಲಭ್ಯವಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.


