ಉಡುಪಿ: ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ಯುವಕನೊಬ್ಬ ತನ್ನ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿ, ರಾತ್ರಿಯಿಡೀ ಅವರ ಮೃತದೇಹಗಳೊಂದಿಗೆ ಮನೆಯಲ್ಲೇ ಇದ್ದ ಬಳಿಕ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ಶರಣಾದ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಸಂಶದ್ ಬೇಗಂ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅವರ ಪುತ್ರ ಶಾಹಿದ್ ಅಲಿ (31) ಎಂದು ಗುರುತಿಸಲಾಗಿದೆ. ಶಾಹಿದ್ ಆಹಾರ ವಿತರಣಾ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಸೋಮವಾರ ರಾತ್ರಿ ಸುಮಾರು 7 ಗಂಟೆಯ ವೇಳೆಗೆ ತಂದೆ-ತಾಯಿ ಜತೆ ಶಾಹಿದ್ ಅಲಿ ಮಾತಿನ ಚಕಮಕಿ ನಡೆಸಿದ್ದಾನೆ ಎನ್ನಲಾಗಿದ್ದು, ಬಳಿಕ ಸುತ್ತಿಗೆಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ, ನಂತರ ಮೃತದೇಹಗಳನ್ನು ರಗ್ಗಿನಿಂದ ಸುತ್ತಿ ಮನೆಯಲ್ಲೇ ಇರಿಸಿದ್ದ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಶಾಹಿದ್ ಅಲಿ ಸ್ವತಃ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮನೆಯಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮನೆಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದು, ಅಲ್ಲಿಯೇ ಇದ್ದ ಶಾಹಿದ್ ಅಲಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಂದೆ-ತಾಯಿ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಹಾಗೂ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು ಎಂದು ಶಾಹಿದ್ ಅಲಿ ಹೇಳಿರುವುದಾಗಿ ತಿಳಿದುಬಂದಿದೆ. ಆದರೆ ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಸ್ಥಳೀಯರ ಪ್ರಕಾರ, ಮೆಹಬೂಬ್ ಅಲಿ ಮಲ್ಪೆಯಿಂದ ಮೀನು ಸಾಗಿಸುವ ಲಾರಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಪರಿಶ್ರಮಿ ವ್ಯಕ್ತಿಯಾಗಿದ್ದರು. ಸಂಶದ್ ಬೇಗಂ ಕೂಡ ಸ್ಥಳೀಯರು ಹಾಗೂ ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ. ಆದರೆ ಶಾಹಿದ್ ಅಲಿ ಹೆಚ್ಚು ಯಾರೊಂದಿಗೂ ಬೆರೆಯದೆ, ಬಹುತೇಕ ಒಂಟಿಯಾಗಿರುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.ಶಾಹಿದ್ ಅಲಿ ಸದಾ ಮೊಬೈಲ್ನಲ್ಲೇ ತೊಡಗಿಸಿಕೊಂಡಿರುತ್ತಿದ್ದ ಎಂಬ ಸ್ಥಳೀಯರ ಹೇಳಿಕೆ ಹಿನ್ನೆಲೆಯಲ್ಲಿ ಆತನ ಮೊಬೈಲ್ ಬಳಕೆ ಹಾಗೂ ಯಾವುದೇ ಆನ್ಲೈನ್ ಆಟದ ಚಟಕ್ಕೆ ಒಳಗಾಗಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕಿದೆ. ಆದರೆ ಹತ್ಯೆಗೆ ಮೊಬೈಲ್ ಅಥವಾ ಆನ್ಲೈನ್ ಆಟವೇ ಕಾರಣ ಎಂಬುದಕ್ಕೆ ಸದ್ಯ ಯಾವುದೇ ದೃಢವಾದ ಸಾಕ್ಷ್ಯ ಲಭ್ಯವಾಗಿಲ್ಲ.

ಇದೇ ವೇಳೆ ಆರೋಪಿ ಕೃತ್ಯ ಎಸಗುವ ಸಂದರ್ಭದಲ್ಲಿ ಯಾವುದೇ ಅಮಲು ಪದಾರ್ಥ ಸೇವಿಸಿದ್ದನೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡ ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿ ಪೊಲೀಸರ ವಶದಲ್ಲಿದ್ದಾನೆ. ಘಟನೆಯಿಂದ ಗಾಂಧಿನಗರದ ನೂರಾರು ಮನೆಗಳ ನಿವಾಸಿಗಳು ಬೆಚ್ಚಿಬಿದ್ದಿದ್ದು, ಕುಟುಂಬದೊಳಗಿನ ಈ ದಾರುಣ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.


