Monday, July 27, 2026

spot_img

ಸಿಬ್ಬಂದಿ ಕೊರತೆಯಿಂದ ಆರ್‌ಟಿಒ ಸೇವೆಗೆ ತೀವ್ರ ವಿಳಂಬ; ಕಚೇರಿಗೆ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ

ಉಡುಪಿ: ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಆರ್‌ಟಿಒ ಕಚೇರಿಯ ಸೇವೆಗಳು ವಿಳಂಬವಾಗುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಆರ್‌ಟಿಒ ಕಚೇರಿಯ ಪ್ರಮುಖ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಹಾಯಕ ಸಾರಿಗೆ ಅಧಿಕಾರಿ ಹುದ್ದೆಗಳು ಖಾಲಿ ಇರುವುದರಿಂದ, ಹಿರಿಯ ಮೋಟಾರು ವಾಹನ ನಿರೀಕ್ಷಕರೇ ಪ್ರಭಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಯಿತು. ಅಲ್ಲದೆ ಮೋಟಾರು ವಾಹನ ನಿರೀಕ್ಷಕರ ಐದು ಹುದ್ದೆಗಳ ಪೈಕಿ ನಾಲ್ಕು ಹುದ್ದೆಗಳು ಖಾಲಿ ಇರುವುದರಿಂದ ಕಚೇರಿಯ ಕಾರ್ಯನಿರ್ವಹಣೆಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಿಬ್ಬಂದಿ ಕೊರತೆಯ ಪರಿಣಾಮವಾಗಿ ಚಾಲನಾ ಪರವಾನಗಿ, ವಾಣಿಜ್ಯ ವಾಹನಗಳು, ಆಟೋ ರಿಕ್ಷಾ, ಬಸ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸೇರಿದಂತೆ ವಿವಿಧ ಸಾರಿಗೆ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಪಡೆಯಲು ವಾಹನ ಮಾಲೀಕರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಕೇವಲ ಇಬ್ಬರು ಮೋಟಾರು ವಾಹನ ನಿರೀಕ್ಷಕರು ವಾರದಲ್ಲಿ ಮೂರು ದಿನ ವಿವಿಧ ತಾಲೂಕುಗಳಲ್ಲಿ ಶಿಬಿರ ನಡೆಸುವುದರ ಜೊತೆಗೆ ಜಿಲ್ಲಾ ಕಚೇರಿಯ ವಾಹನಗಳ ತಪಾಸಣೆ ಹಾಗೂ ಜಿಲ್ಲೆಯ 22 ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳ ವಾಹನಗಳ ಪರಿಶೀಲನೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಇದರಿಂದ ಕಾರ್ಯಭಾರ ಮತ್ತಷ್ಟು ಹೆಚ್ಚಾಗಿದೆ.

ರಾಜ್ಯ ಸರ್ಕಾರಕ್ಕೆ ವಾರ್ಷಿಕ ರೂ 312 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿರುವ ಉಡುಪಿ ಆರ್‌ಟಿಒ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಿಸದೇ ಇರುವುದರಿಂದ ಸಾರ್ವಜನಿಕರು ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು. ಬ್ರಹ್ಮಾವರ ತಾಲೂಕು ರಚನೆಯಾಗಿ ಹಲವು ವರ್ಷಗಳಾದರೂ ಸಿಬ್ಬಂದಿ ಕೊರತೆಯಿಂದ ಅಲ್ಲಿನ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರ ಬೇಡಿಕೆಯಂತೆ ಆರ್‌ಟಿಒ ಕ್ಯಾಂಪ್ ಆರಂಭಿಸಲು ಸಾಧ್ಯವಾಗಿಲ್ಲ. ಇದರಿಂದ ಕಾರ್ಮಿಕ ವರ್ಗದ ಚಾಲಕರು ಸಣ್ಣಪುಟ್ಟ ಕೆಲಸಗಳಿಗೂ ಉಡುಪಿ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ.

ಕಚೇರಿಯ ಖಾಲಿ ಹುದ್ದೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಯಶ್‌ಪಾಲ್ ಸುವರ್ಣ, ಈ ಕುರಿತು ಸಾರಿಗೆ ಸಚಿವರನ್ನು ಭೇಟಿಯಾಗಿ ಅಗತ್ಯ ಸಿಬ್ಬಂದಿಯನ್ನು ಶೀಘ್ರ ನೇಮಕ ಮಾಡುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಜೊತೆಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಆರ್‌ಟಿಒ ಕಚೇರಿ ಆವರಣದಲ್ಲಿ ಗಿಡಗಂಟಿಗಳು ಬೆಳೆದಿರುವುದನ್ನು ಗಮನಿಸಿದ ಶಾಸಕರು, ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು ಕಚೇರಿ ಪರಿಸರವನ್ನು ಶುಚಿಯಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles