ಉಡುಪಿ: ಅಸಹಾಯಕ ಸ್ಥಿತಿಯಲ್ಲಿ ಉಡುಪಿ ನಗರದಲ್ಲಿ ಪತ್ತೆಯಾಗಿದ್ದ ಹಿರಿಯ ನಾಗರಿಕ ಮಹಿಳೆಯೊಬ್ಬರನ್ನು ಪೊಲೀಸ್ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಆಶ್ರಮದ ಸಂಯುಕ್ತ ಪ್ರಯತ್ನದ ಮೂಲಕ ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಮರುಸೇರ್ಪಡೆಗೊಳಿಸಲಾಗಿದೆ. ಉಡುಪಿ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ 62 ವರ್ಷದ ರಂಗಮ್ಮ ಅವರನ್ನು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ರಕ್ಷಿಸಿ, ತಾತ್ಕಾಲಿಕ ಆಶ್ರಯಕ್ಕಾಗಿ ನಿಟ್ಟೂರಿನ ಸಖಿ ಸೆಂಟರ್‌ಗೆ ದಾಖಲಿಸಿದ್ದರು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸಖಿ ಸೆಂಟರ್‌ಗೆ ಭೇಟಿ ನೀಡಿ ವಿಚಾರಣೆ ನಡೆಸಿದ ವೇಳೆ, ಅವರು ತಮ್ಮ ಹೆಸರು ರಂಗಮ್ಮ ಎಂದು ತಿಳಿಸಿದ್ದು, ಬದ್ರಮ್ಮ ಹಾಗೂ ಸುಮನ್ ಎಂಬ ಇಬ್ಬರು ಮಕ್ಕಳಿದ್ದು, ಮೂಲತಃ ತೆಲಂಗಾಣದ ನಗರಂ ಕಾಲೋನಿಯ ನಿವಾಸಿಯಾಗಿರುವುದಾಗಿ ಮಾಹಿತಿ ನೀಡಿದರು. ಕಳೆದ ಎರಡು ವರ್ಷಗಳಿಂದ ಮಕ್ಕಳ ಸಂಪರ್ಕವಿಲ್ಲದೆ ಬದುಕುತ್ತಿರುವುದಾಗಿ ಅವರು ತಿಳಿಸಿದ್ದರು.

ಆಶ್ರಯವಿಲ್ಲದ ಕಾರಣ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಸೂಚನೆಯಂತೆ ಸಂಬಂಧಿಕರು ಪತ್ತೆಯಾಗುವವರೆಗೆ ರಂಗಮ್ಮ ಅವರನ್ನು ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಲಾಯಿತು. ಈ ಪ್ರಕ್ರಿಯೆಯನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕ ರೋಶನ್ ಕೆ. ಹಾಗೂ ಆಪ್ತ ಸಮಾಲೋಚಕಿ ನಯನ ನಿರ್ವಹಿಸಿದರು. ಇದೇ ವೇಳೆ ರಂಗಮ್ಮ ಅವರ ಮಕ್ಕಳನ್ನು ಪತ್ತೆಹಚ್ಚುವಂತೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಉಡುಪಿ ನಗರ ಪೊಲೀಸ್ ಠಾಣೆಗೆ ಮನವಿ ಮಾಡಿತ್ತು. ಈ ಮನವಿಯ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್‌ಐ ವಿಜಯ್ ಹಾಗೂ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹನುಮಂತಪ್ಪ ವಿಭೂತಿ ಅವರು ರಂಗಮ್ಮ ನೀಡಿದ್ದ ವಿಳಾಸದ ಆಧಾರದಲ್ಲಿ ತೆಲಂಗಾಣಕ್ಕೆ ತೆರಳಿ ಪರಿಶೀಲನೆ ನಡೆಸಿ, ಅವರ ಪುತ್ರ ಸುಮನ್ ಅವರನ್ನು ಪತ್ತೆಹಚ್ಚಿದರು. ಬಳಿಕ ಸುಮನ್ ಅವರನ್ನು ಉಡುಪಿಗೆ ಕರೆತಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಹಾಜರುಪಡಿಸಿದರು.

ಅಲ್ಲಿ ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ–2007″ ಕುರಿತು ಪುತ್ರನಿಗೆ ಮಾಹಿತಿ ನೀಡಿ, ತಾಯಿಯ ಪಾಲನೆ–ಪೋಷಣೆ ಮಾಡುವುದು ಕಾನೂನುಬದ್ಧ ಜವಾಬ್ದಾರಿಯೆಂದು ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಸ್ಪಂದಿಸಿದ ಸುಮನ್, ಇನ್ನು ಮುಂದೆ ತಾಯಿಯನ್ನು ಗೌರವದಿಂದ ನೋಡಿಕೊಳ್ಳುವುದಾಗಿ ಹಾಗೂ ಇಂತಹ ಪರಿಸ್ಥಿತಿ ಮರುಕಳಿಸದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ರಂಗಮ್ಮ ಅವರನ್ನು ಹೊಸ ಬೆಳಕು ಆಶ್ರಮದಿಂದ ಬಿಡುಗಡೆಗೊಳಿಸಿ, ಅವರ ಪುತ್ರ ಸುಮನ್ ಅವರೊಂದಿಗೆ ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು.

ಈ ಪ್ರಕರಣವನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್, ಅವರ ಮಾರ್ಗದರ್ಶನ, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಸಹಕಾರ, ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ಹೊಸ ಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್ ಅವರ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕ ರೋಶನ್ ಕೆ. ಮತ್ತು ಆಪ್ತ ಸಮಾಲೋಚಕಿ ನಯನ ಅವರ ಸಮನ್ವಯದೊಂದಿಗೆ ಪ್ರಕರಣ ಯಶಸ್ವಿಯಾಗಿ ಇತ್ಯರ್ಥಗೊಂಡಿದೆ.



