Thursday, July 23, 2026

spot_img

ವೈಜ್ಞಾನಿಕ ಜೇನು ಕೃಷಿ ತರಬೇತಿಗೆ ಚಾಲನೆ..

ಉಡುಪಿ : ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನುನೊಣಗಳ ಮಹತ್ವವನ್ನು ರೈತರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಜುಲೈ 23ರಿಂದ 25ರವರೆಗೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳ ವೈಜ್ಞಾನಿಕ ಜೇನು ಕೃಷಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ವಾಸುಕಿ ರಾಘವ ಜೇನು ನರ್ಸರಿ ಮತ್ತು ಫಾರ್ಮ್‌ಗಳ ಸಹಯೋಗದಲ್ಲಿ ಆಯೋಜಿಸಲಾದ ಈ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೇನು ಕೃಷಿಯನ್ನು ಪೂರಕ ಆದಾಯದ ಮೂಲವಾಗಿ ಮಾತ್ರವಲ್ಲ, ಸ್ವತಂತ್ರ ಉದ್ಯಮವಾಗಿಯೂ ಪರಿಗಣಿಸಬೇಕು. ಜೇನುನೊಣಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಜೇನು ಸಾಕಾಣಿಕೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸದಾನಂದ ಆಚಾರ್ಯ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ವೈಜ್ಞಾನಿಕ ವಿಧಾನದಲ್ಲಿ ಜೇನು ಕೃಷಿ ಕೈಗೊಂಡರೆ ರೈತರು ಉತ್ತಮ ಆದಾಯ ಗಳಿಸುವುದರ ಜೊತೆಗೆ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸಬಹುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ. ಭೂಮಿಕಾ ಎಚ್.ಆರ್., ಜೇನು ಸಾಕಾಣಿಕೆ ಕೇವಲ ಆದಾಯದ ಮೂಲವಲ್ಲ; ಪರಿಸರ ಸಮತೋಲನ ಕಾಪಾಡುವ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನುನೊಣಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಜೇನುನೊಣಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ರೇವಣ್ಣವರ್ ಜೇನುನೊಣಗಳ ವೈಜ್ಞಾನಿಕ ಮಹತ್ವ ಹಾಗೂ ಕೃಷಿಯಲ್ಲಿ ಅವುಗಳ ಪಾತ್ರವನ್ನು ವಿವರಿಸಿದರು.

ಇನ್ನೋರ್ವ ಮುಖ್ಯ ಅತಿಥಿ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರವಿರಾಜ್ ಶೆಟ್ಟಿ ಜಿ., ಜೇನು ಕೃಷಿಯು ರೈತರಿಗೆ ಉತ್ತಮ ಆದಾಯ ತರುವ ವೃತ್ತಿಯಾಗಿದ್ದು, ಜೇನಿನ ಔಷಧೀಯ ಗುಣಗಳಿಂದಾಗಿ ಅದರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜತೆಗೆ ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಜೇನುನೊಣಗಳ ಪಾತ್ರ ಅನನ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಕ್ಷೇತ್ರಾಧಿಕಾರಿ ಡಾ. ನವೀನ್ ಎನ್.ಇ., ಸಹಾಯಕ ತೋಟಗಾರಿಕಾ ನಿರ್ದೇಶಕ ಗುರುಪ್ರಸಾದ್, ಪ್ರಗತಿಪರ ಜೇನು ಕೃಷಿಕ ಸುರೇಶ್ ಕಕ್ಕೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಮುಖ್ಯ ತಾಂತ್ರಿಕ ಅಧಿಕಾರಿ ಶೈಲಜಾ ಸ್ವಾಗತಿಸಿ, ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles