ಉಡುಪಿ: ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಆದಿಮಾಯೆ ಮೂಕಾಂಬಿಕಾ ಕ್ಷೇತ್ರ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಆಶ್ರಯದಲ್ಲಿ ಆದಿಮಾಯೆ ಮೂಕಾಂಬಿಕಾ, ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕುಕ್ಕೆಹಳ್ಳಿ ವತಿಯಿಂದ ಪ್ರಥಮ ಯಕ್ಷಗಾನ ಬಯಲಾಟವು ಇದೇ ವರ್ಷದ ನವೆಂಬರ್ ತಿಂಗಳಿನಿಂದ ಆರಂಭಗೊಳ್ಳಲಿದೆ ಎಂದು ಮೇಳದ ಯಜಮಾನ ಡಾ. ಕೆ. ಕೃಷ್ಣ ಕುಲಾಲ್ ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ಕೊರಗಜ್ಜ ದೈವ ಹಾಗೂ ಆದಿಮಾಯೆ ಮೂಕಾಂಬಿಕಾ ದೇವಿಯ ಅಪ್ಪಣೆಯಂತೆ ಶ್ರೀ ಕ್ಷೇತ್ರ ಕುಕ್ಕೆಹಳ್ಳಿಯ ಆಶ್ರಯದಲ್ಲಿ ನೂತನ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಇದು ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು. ಈ ಮಂಡಳಿಯ ವಿಶೇಷತೆಯಾಗಿ ತೆಂಕುತಿಟ್ಟು ಹಾಗೂ ಬಡಗುತಿಟ್ಟು ಶೈಲಿಗಳ ಸಮ್ಮಿಲನ ಇರಲಿದ್ದು, ಅನುಭವಿ ಹಾಗೂ ಪ್ರತಿಭಾವಂತ ಕಲಾವಿದರ ತಂಡವು ಪ್ರೇಕ್ಷಕರ ಮುಂದೆ ವಿಭಿನ್ನ ರೀತಿಯ ಪ್ರದರ್ಶನ ನೀಡಲಿದೆ. ಹೊಸ ವೇಷಭೂಷಣಗಳು, ಆಕರ್ಷಕ ರಂಗಸಜ್ಜಿಕೆ, ಗುಣಮಟ್ಟದ ಹಿಮ್ಮೇಳ ಹಾಗೂ ಕಲಾತ್ಮಕ ನಿರೂಪಣೆಯೊಂದಿಗೆ ಯಕ್ಷಗಾನವನ್ನು ಮತ್ತಷ್ಟು ವೈಭವಯುತವಾಗಿ ಪ್ರೇಕ್ಷಕರಿಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಕ್ಷೇತ್ರದ ಮಹಿಮೆಯನ್ನು ಸಾರುವ ವಿಶೇಷ ಪ್ರಸಂಗಗಳ ಜೊತೆಗೆ ಪೌರಾಣಿಕ ಹಾಗೂ ಸಾಮಾಜಿಕ ಕಥಾವಸ್ತುಗಳನ್ನು ಒಳಗೊಂಡ ಯಕ್ಷಗಾನಗಳನ್ನು ಹೆಸರಾಂತ ಕಲಾವಿದರ ಅಭಿನಯದಲ್ಲಿ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಯಕ್ಷಗಾನ ಕಲೆಯ ಸಂರಕ್ಷಣೆ, ಬೆಳವಣಿಗೆ ಹಾಗೂ ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಈ ಮಂಡಳಿ ಬದ್ಧವಾಗಿದ್ದು, ಗುಣಮಟ್ಟದ ಪ್ರದರ್ಶನಗಳ ಮೂಲಕ ಕಲಾಭಿಮಾನಿಗಳ ಮೆಚ್ಚುಗೆ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ನವೆಂಬರ್ ತಿಂಗಳ ಎರಡನೇ ವಾರದಿಂದ ಮೇಳದ ತಿರುಗಾಟ ಆರಂಭವಾಗಲಿದ್ದು, ಯಕ್ಷಗಾನ ಅಭಿಮಾನಿಗಳು, ದಾನಿಗಳು ಹಾಗೂ ಸಾರ್ವಜನಿಕರು ಈ ಹೊಸ ಪ್ರಯತ್ನಕ್ಕೆ ಸಹಕಾರ, ಪ್ರೋತ್ಸಾಹ ಮತ್ತು ಆಶೀರ್ವಾದ ನೀಡುವಂತೆ ಡಾ. ಕೆ. ಕೃಷ್ಣ ಕುಲಾಲ್ ಮನವಿ ಮಾಡಿದರು. ಮೇಳದ ಪ್ರಬಂಧಕ ಅರುಣ್ ಕುಮಾರ್ ಜಾರ್ಕಳ ಮಾತನಾಡಿ, ಪ್ರಸಕ್ತ ಸಾಲಿನ ಯಕ್ಷಗಾನ ತಿರುಗಾಟದಲ್ಲಿ ಸುಮಾರು 32ರಿಂದ 33 ಮಂದಿ ಕಲಾವಿದರು ಸೇವೆ ಸಲ್ಲಿಸಲಿದ್ದು, ಮನರಂಜನೆಯೊಂದಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮೇಳ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಮೇಳದ ಭಾಗವತರಾಗಿ ಆರ್.ಡಿ. ಸಂತೋಷ ಕುಮಾರ್ ಹಾಗೂ ಸುರೇಶ್ ನಾಯ್ಕ ಕನ್ನಾರು, ಸಂಗೀತ ವಿಭಾಗದಲ್ಲಿ ಕಿಶನ್ ಪೂಜಾರಿ ಬಾಳೆಹಿತ್ಲು, ಮದ್ದಳೆ ವಾದಕರಾಗಿ ಶಶಿಕುಮಾರ್ ಆಚಾರ್ಯ ಬೆಳ್ಳಲೆ ಹಾಗೂ ವಿಶ್ವನಾಥ ಭಟ್ ಬೆಂಗಳೂರು, ಚೆಂಡೆ ವಾದಕರಾಗಿ ರಾಕೇಶ್ ಮಲ್ಯ ಹಳ್ಳಾಡಿ ಹಾಗೂ ಮಂಜುನಾಥ ನಾವಡ ಸೇವೆ ಸಲ್ಲಿಸಲಿದ್ದಾರೆ.

ಮುಮ್ಮೇಳದಲ್ಲಿ ಜನಾರ್ದನ ಗುಡಿಗಾರ, ಅರಳಿಸುರುಳಿ ಚಂದ್ರ ಶೆಟ್ಟಿ, ಅಕ್ಷಯ್ ಗೌಡ ಕೌಲದ್ದ, ದಿನೇಶ್ ಕನ್ನಾರು, ಗುರುಪ್ರಸಾದ್ ಸರಳಾಯ, ಪ್ರಕಾಶ್ ನಾಯ್ಕ ಹೆಗ್ಗೋಡು, ರವೀಂದ್ರ ನಾಯ್ಕ ಬಾಡ, ಅಮೃತ್ ಪುತ್ತೆ, ಜಿತೇಶ್ ನಾಯಕ್ ಮೂಡಬಿದ್ರೆ, ಶ್ಯಾಮ್ ಗೌಡ ತಲ್ಲೂರಂಗಡಿ, ದೀಪಕ್ ಹೆಗಡೆ ಶೃಂಗೇರಿ ಹಾಗೂ ಅಭಿಷೇಕ ಕಡೆಗದ್ದೆ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಸ್ತ್ರೀವೇಷದಲ್ಲಿ ಜಯರಾಮ ಕೊಠಾರಿ, ಯೋಗೀಶ್ ನೇರಳಕಟ್ಟೆ, ಶ್ರೀಶ ನಾಯಕ್ ಪರ್ಕಳ ಹಾಗೂ ಅರುಣ್ ನಾಯಕ್ ಪರ್ಕಳ ಅಭಿನಯಿಸಲಿದ್ದು, ಹಾಸ್ಯ ವಿಭಾಗದಲ್ಲಿ ಅರುಣ್ ಕುಮಾರ್ ಜಾರ್ಕಳ ಹಾಗೂ ರತೀಶ್ ಶೆಟ್ಟಿ ಹಳ್ಳಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮೇಳದ ಅರ್ಚಕರಾಗಿ ಶ್ರೀ ಗುರು ಭಟ್ ಪೆರ್ಲ ಸೇವೆ ಸಲ್ಲಿಸಲಿದ್ದು, ರಂಗ ಸಹಾಯಕರಾಗಿ ಕಮಲಾಕ್ಷ, ಉದಯ, ಶರತ್, ಮಹೇಂದ್ರ ಹಾಗೂ ಮೇಘರಾಜ ಮಲ್ಲಿಕಾರ್ಜುನ ಕಾರ್ಯನಿರ್ವಹಿಸಲಿದ್ದಾರೆ. ಮೇಳದಲ್ಲಿ ಪಿ.ವಿ. ಆನಂದ ಸಾಲಿಗ್ರಾಮ ರಚಿಸಿರುವ ಕುಕ್ಕೆಹಳ್ಳಿ ಆದಿಮಾಯೆ ಸ್ವಾಮಿ ಕೊರಗಜ್ಜ ಮಹಾತ್ಮೆ ಎಂಬ ವಿಶೇಷ ಯಕ್ಷಗಾನ ಪ್ರಸಂಗದ ಜೊತೆಗೆ, ದೇವದಾಸ್ ಈಶ್ವರಮಂಗಲ ಅವರ ವೈಭವ ಸೂರ್ಯವಂಶಿ ಕಥಾ ಪ್ರಸಂಗವೂ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ದೇವದಾಸ್ ಈಶ್ವರಮಂಗಲ, ಆರ್.ಡಿ. ಸಂತೋಷ ಕುಮಾರ್ ಹಾಗೂ ಶಶಿಕುಮಾರ್ ಆಚಾರ್ಯ ಬೆಳ್ಳಲೆ ಉಪಸ್ಥಿತರಿದ್ದರು.


