Tuesday, July 14, 2026

spot_img

ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಅಗ್ನಿ ಅವಘಡ: ಸಮಗ್ರ ತನಿಖೆಗೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಕುಚ್ಚೂರು ಆಗ್ರಹ

ಉಡುಪಿ : ಉಡುಪಿ ಜಿಲ್ಲೆಯ ವಿವಿಧ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಅಗ್ನಿ ಅವಘಡಗಳ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಕುಚ್ಚೂರು ಆಗ್ರಹಿಸಿದರು. ಉಡುಪಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೋಟೇಶ್ವರ, ವಾರಂಬಳ್ಳಿ, ಹೆಬ್ರಿ ತಾಲೂಕಿನ ಬೆಳ್ವೆಯ ಎಸ್‌ಎಲ್‌ಆರ್‌ಎಂ ಘಟಕ, ಹೆಬ್ರಿ ತಾಲೂಕಿನ 16 ಗ್ರಾಮಗಳಿಗೆ ಸಂಬಂಧಿಸಿದ ಎಂಆರ್‌ಎಫ್ ಘಟಕ ಹಾಗೂ ಕಾರ್ಕಳ ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಡಂಪಿಂಗ್ ಯಾರ್ಡ್ ಸೇರಿದಂತೆ ಹಲವು ತ್ಯಾಜ್ಯ ವಿಲೇವಾರಿ ಕೇಂದ್ರಗಳಲ್ಲಿ ಮರುಮರು ಬೆಂಕಿ ಅವಘಡಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಈ ಘಟಕಗಳಲ್ಲಿ ಕೇವಲ ತ್ಯಾಜ್ಯ ಮಾತ್ರವಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು, ಮೆಷಿನರಿಗಳು ಹಾಗೂ ಕಟ್ಟಡಗಳು ಬೆಂಕಿಗೆ ಆಹುತಿಯಾಗುತ್ತಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಘಟನೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಬದಲು ಹಾರಿಕೆಯ ರೀತಿಯ ಉತ್ತರಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಹೆಬ್ರಿಯ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಬೇಸಿಗೆಯ ತೀವ್ರ ಬಿಸಿಲಿನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈಗ ಮಳೆಗಾಲದಲ್ಲಿಯೂ ಕಾರ್ಕಳದ ಕರಿಯಕಲ್ಲು ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದರು.

ಸ್ವಚ್ಛ ಭಾರತ್ ಯೋಜನೆಯಡಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಪದೇ ಪದೇ ಬೆಂಕಿ ಬೀಳುತ್ತಿರುವುದು ಗಂಭೀರ ವಿಷಯವಾಗಿದೆ. ಪ್ರತಿ ಬಾರಿ ಬೆಂಕಿಯಿಂದ ಹಾನಿಗೊಳಗಾದ ಘಟಕಗಳನ್ನು ಮರುನಿರ್ಮಿಸಲು ಮತ್ತೆ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಈ ಘಟನೆಗಳನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ, ಸಮಗ್ರ, ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ಉತ್ತರ ನೀಡಬೇಕು ಎಂದು ಶ್ರೀಕಾಂತ್ ಕುಚ್ಚೂರು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles