ಉಡುಪಿ : ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಎರಡು ಖಾಸಗಿ ಬಸ್‌ಗಳ ಚಾಲಕರ ನಡುವೆ ಉಂಟಾದ ವಾಗ್ವಾದ ಭಾರೀ ಅವಾಂತರಕ್ಕೆ ಕಾರಣವಾಗಿದ್ದು, ಚಾಲಕನೊಬ್ಬ ಮತ್ತೊಂದು ಬಸ್‌ಗೆ ಎರಡೆರಡು ಬಾರಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಮಾಹಿತಿಯ ಪ್ರಕಾರ, ಪ್ರಯಾಣಿಕರನ್ನು ಹತ್ತಿಸಿಕೊಂಡು ಟಿಎಂಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ, ಪಿಎಂಟಿ ಬಸ್ ಚಾಲಕ ತನ್ನ ಬಸ್ ಅನ್ನು ಅಡ್ಡವಾಗಿ ತಂದು ನಿಲ್ಲಿಸಿದ್ದಾನೆ. ಇದರಿಂದ ಎರಡೂ ಬಸ್ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ತೀವ್ರಗೊಂಡಿದೆ. ಇದರಿಂದ ಆಕ್ರೋಶಗೊಂಡ ಟಿಎಂಟಿ ಬಸ್ ಚಾಲಕ ಮೊದಲು ತನ್ನ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ, ಬಳಿಕ ಎದುರಿದ್ದ ಬಸ್‌ಗೆ ಎರಡೆರಡು ಬಾರಿ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದಿದ್ದಾನೆ ಎನ್ನಲಾಗಿದೆ.

ಘಟನೆಯ ಪರಿಣಾಮ ಪಿಎಂಟಿ ಬಸ್‌ನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಬಸ್‌ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಘಟನೆಯ ವೇಳೆ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ದೃಶ್ಯಗಳು ಸ್ಥಳದಲ್ಲಿದ್ದವರ ಮೊಬೈಲ್‌ಗಳಲ್ಲಿ ಸೆರೆ ಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ವರ್ತಿಸಿದ ಸಂಬಂಧಿತ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ನಿರ್ಲಕ್ಷ್ಯ ತೋರಿಸುವ ಖಾಸಗಿ ಸಿಟಿ ಬಸ್‌ಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆಯ ಕುರಿತು ಪೊಲೀಸ್ ಇಲಾಖೆ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.


