ಉಡುಪಿ : ಮೃತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ವಂಚನೆ ಮೂಲಕ ತಮ್ಮ ಹೆಸರಿಗೆ ನೋಂದಾಯಿಸಿಕೊಂಡ ಆರೋಪದಡಿ ಆರು ಮಂದಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈನ ದಹಿಸರ್ (ಪಶ್ಚಿಮ) ನಿವಾಸಿ ಸುನೀಲ್ ದೇವ ಪೈ (57) ಅವರ ಅಜ್ಜ ಕೃಷ್ಣರಾಯ ಪೈ ಅವರು ಕುಂದಾಪುರ ಕಸಬಾ ಗ್ರಾಮದ ವಿವಿಧ ಸರ್ವೇ ಸಂಖ್ಯೆಗಳಲ್ಲಿರುವ ಜಾಗಗಳನ್ನು 1968ರಲ್ಲಿ ಖರೀದಿಸಿ ಅನುಭವಿಸಿಕೊಂಡು ಬಂದಿದ್ದರು. ಬಳಿಕ 1978ರಲ್ಲಿ ಅವರು ನಿಧನರಾದ ನಂತರ, ಆಸ್ತಿಯ ಪಹಣಿಗಳನ್ನು ವಾರಸುದಾರರ ಹೆಸರಿಗೆ ವರ್ಗಾಯಿಸಲಾಗಿತ್ತು. ಆರೋಪಿ ರಾಮಚಂದ್ರ ಕಾಮತ್ ಸೇರಿದಂತೆ ಇತರ ಆರೋಪಿಗಳಾದ ಗಣಪ, ರಾಧಾಕೃಷ್ಣ ಸಾರಂಗ, ಸಂಜೀವ, ಲಕ್ಷಣ ಶೆಟ್ಟಿ ಹಾಗೂ ನಾಗೇಶ್ ಕಾಮತ್ ಸೇರಿ ಸಂಚು ರೂಪಿಸಿ, 2014ರಲ್ಲಿ ಮೃತಪಟ್ಟಿದ್ದ ದೇವರಾಯ ಪೈ ಅವರ ಹೆಸರಿನಲ್ಲಿ ನಕಲಿ ಪ್ಯಾನ್ ಕಾರ್ಡ್ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಸುಮಾರು 25 ವರ್ಷಗಳ ಹಿಂದೆ ಮೃತಪಟ್ಟಿದ್ದ ವಕೀಲ ಕೆ. ಆನಂದ (ಆನಂದರಾವ್) ಅವರ ಹೆಸರಿನಲ್ಲಿಯೂ ನಕಲಿ ಪ್ಯಾನ್ ಕಾರ್ಡ್ ತಯಾರಿಸಿರುವ ಆರೋಪ ಕೇಳಿಬಂದಿದೆ. ಈ ನಕಲಿ ದಾಖಲೆಗಳನ್ನು ಆಧಾರವಾಗಿಸಿಕೊಂಡು 2025ರ ಡಿಸೆಂಬರ್ 5ರಂದು ಜನರಲ್ ಪವರ್ ಆಫ್ ಅಟಾರ್ನಿ ದಾಖಲೆಯನ್ನು ಸೃಷ್ಟಿಸಿ, ಮರುದಿನ ಅದನ್ನು ಕುಂದಾಪುರ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಗೆ ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನೋಂದಣಿ ಪ್ರಕ್ರಿಯೆಯ ವೇಳೆ ಮೃತ ದೇವರಾಯ ಪೈ ಅವರ ಸ್ಥಾನದಲ್ಲಿ ಮೊದಲ ಆರೋಪಿ ರಾಮಚಂದ್ರ ಕಾಮತ್ ಹಾಜರಾಗಿ, ಮೃತ ವಕೀಲ ಕೆ. ಆನಂದ ಅವರ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಹಾಜರುಪಡಿಸಿ ಸಹಿ, ಛಾಯಾಚಿತ್ರ ಸೇರಿದಂತೆ ದಾಖಲೆಗಳನ್ನು ನಕಲಿ ರೀತಿಯಲ್ಲಿ ಸೃಷ್ಟಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.



