Wednesday, June 3, 2026

spot_img

15 ವರ್ಷಗಳ ಬಳಿಕ ಕುಟುಂಬದೊಂದಿಗೆ ಸೇರಿಕೊಂಡ ಮಾನಸಿಕ ಅಸ್ವಸ್ಥ ಮಹಿಳೆ..

ಉಡುಪಿ : ಸುಮಾರು 15 ವರ್ಷಗಳ ಹಿಂದೆ ಕುಟುಂಬದಿಂದ ದೂರಾಗಿ ಮಾನಸಿಕ ಅಸ್ವಸ್ಥತೆಯಿಂದ ಅಲೆದಾಡುತ್ತಿದ್ದ ಮಹಿಳೆಯೊಬ್ಬರು ಕೊನೆಗೂ ತಮ್ಮ ಕುಟುಂಬದವರೊಂದಿಗೆ ಮತ್ತೆ ಒಂದಾಗಿರುವ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. 2017ರ ಫೆಬ್ರವರಿ 22ರಂದು ಮುಲ್ಕಿಯ ವಿಜಯ ಸನ್ನಿಧಿ ಸಮೀಪದ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮಹಿಳೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಯ ಸಹಾಯದಿಂದ ವಿಶ್ವಾಸದ ಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಆಶ್ರಮದಲ್ಲಿ ಮಹಿಳೆಗೆ ಸ್ನಾನ, ಶುಚಿತ್ವ, ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ಆರೈಕೆ ಒದಗಿಸಲಾಗಿತ್ತು. ಆರಂಭದಲ್ಲಿ ತನ್ನ ಹೆಸರು ಸಾಧನಾ ಎಂದು ಮಾತ್ರ ಹೇಳುತ್ತಿದ್ದ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಬಳಿಕ ನಿರಂತರ ಆರೈಕೆ ಹಾಗೂ ಚಿಕಿತ್ಸೆಯಿಂದ ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ಕಾಲಕ್ರಮೇಣ ಆಶ್ರಮದ ಸಿಬ್ಬಂದಿ ಆಕೆಯೊಂದಿಗೆ ಸಂವಾದ ನಡೆಸಿದಾಗ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯವರು ಎಂಬ ಮಾಹಿತಿ ದೊರೆತಿತ್ತು. ಆದರೆ ನೀಡಿದ ವಿಳಾಸದ ಆಧಾರದ ಮೇಲೆ ಕುಟುಂಬವನ್ನು ಪತ್ತೆಹಚ್ಚುವ ಪ್ರಯತ್ನಗಳು ಫಲಕಾರಿಯಾಗಿರಲಿಲ್ಲ.

ಇತ್ತೀಚೆಗೆ ಆಶ್ರಮದ ಸಿಬ್ಬಂದಿ ಮತ್ತೊಮ್ಮೆ ಮಹಿಳೆಯೊಂದಿಗೆ ಮಾತನಾಡಿದಾಗ ಮನೆಗೆ ತೆರಳುವ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಚಿಮೂರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು. ಪೊಲೀಸ್ ಇಲಾಖೆ ಮಹಿಳೆಯ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು. ಮೇ 28ರಂದು ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಿದ ಬಳಿಕ, ಜೂನ್ 3ರಂದು ಮಹಿಳೆಯ ಸಹೋದರ ಶಂಕರ್ ಹಾಗೂ ಕುಟುಂಬದ ಸದಸ್ಯರು ವಿಶ್ವಾಸದ ಮನೆ ಆಶ್ರಮಕ್ಕೆ ಆಗಮಿಸಿ ಸಾಧನಾ ಅವರನ್ನು ಭೇಟಿಯಾದರು. ಸುಮಾರು 15 ವರ್ಷಗಳ ಬಳಿಕ ತಮ್ಮ ಸಹೋದರಿಯನ್ನು ಕಂಡ ಸಂತಸ ಕುಟುಂಬದವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಸಾಧನಾ ಅವರ ಸಹೋದರ ಮಾತನಾಡಿ, ತಂಗಿ ಸುಮಾರು 15 ವರ್ಷಗಳ ಹಿಂದೆ ಮನೆಯಿಂದ ಹೊರಟು ಹೋಗಿದ್ದರು. ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದ ಕಾರಣ ಹಲವು ಬಾರಿ ಮನೆ ಬಿಟ್ಟು ತೆರಳುತ್ತಿದ್ದರು. ಆದರೆ ಈ ಬಾರಿ ಮರಳಿ ಬಂದಿರಲಿಲ್ಲ. ಇಷ್ಟು ವರ್ಷಗಳ ಬಳಿಕ ಅವರನ್ನು ಸುರಕ್ಷಿತವಾಗಿ ನೋಡುತ್ತಿರುವುದು ನಮಗೆ ಅಪಾರ ಸಂತೋಷ ತಂದಿದೆ ಎಂದು ಭಾವುಕರಾದರು. ಸಾಧನಾ ಅವರಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ಕಾಣೆಯಾಗಿದ್ದಾಗ ಮಕ್ಕಳು ಚಿಕ್ಕವರಾಗಿದ್ದು, ಈಗ ದೊಡ್ಡವರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಾಸದ ಮನೆ ಆಶ್ರಮದ ಸಿಬ್ಬಂದಿ ಹಾಗೂ ನಿರ್ವಾಹಕರ ಸೇವೆಯನ್ನು ಕುಟುಂಬದವರು ಕೃತಜ್ಞತೆಯಿಂದ ಸ್ಮರಿಸಿದರು. ಮಾನಸಿಕ ಅಸ್ವಸ್ಥತೆ ಹಾಗೂ ಅನಾಥ ಸ್ಥಿತಿಯಲ್ಲಿ ಅಲೆದಾಡುವ ಅನೇಕರಿಗೆ ಆಶ್ರಯ, ಚಿಕಿತ್ಸೆ ಮತ್ತು ಪುನರ್ವಸತಿ ಒದಗಿಸುತ್ತಿರುವ ವಿಶ್ವಾಸದ ಮನೆ ಆಶ್ರಮದ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕುಟುಂಬದಿಂದ ದೂರಾದ ಅನೇಕ ಮಂದಿಯನ್ನು ಮರಳಿ ತಮ್ಮವರೊಂದಿಗೆ ಸೇರಿಸುವ ಮಹತ್ತರ ಕಾರ್ಯದಲ್ಲಿ ತೊಡಗಿರುವ ಆಶ್ರಮದ ಸೇವೆ ಸಮಾಜಕ್ಕೆ ಮಾದರಿಯಾಗಿದೆ. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles