Monday, June 1, 2026

spot_img

ಯಕ್ಷಗಾನ ಕಲಾವಿದರ 26ನೇ ಸಮಾವೇಶ: 800ಕ್ಕೂ ಅಧಿಕ ಕಲಾವಿದರ ಭಾಗಿ

ಉಡುಪಿ : ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಆಯೋಜಿಸಲಾದ ವೃತ್ತಿನಿರತ ಯಕ್ಷಗಾನ ಕಲಾವಿದರ 26ನೇ ಸಮಾವೇಶವು ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧ ಯಕ್ಷಗಾನ ಮೇಳಗಳಿಂದ ಆಗಮಿಸಿದ್ದ 800ಕ್ಕೂ ಅಧಿಕ ಕಲಾವಿದರು ಸಮಾವೇಶದಲ್ಲಿ ಭಾಗವಹಿಸಿದರು.

ಅಪರಾಹ್ನ ನಡೆದ ಪ್ರಧಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ಯಕ್ಷಗಾನವು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಪುರಾಣ ಕಥೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಅಪರೂಪದ ಕಲಾಪ್ರಕಾರವಾಗಿದೆ ಎಂದು ಹೇಳಿದರು. ಇತರ ಕಲಾ ಕಾರ್ಯಕ್ರಮಗಳಿಗೆ ಹೋಲಿಸಿದರೆ ಯಕ್ಷಗಾನ ಪ್ರದರ್ಶನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದೇ ಅದರ ಜನಪ್ರಿಯತೆ ಮತ್ತು ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಭಾಶಯ ಸಂದೇಶ ನೀಡಿದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ ಗಂಟಿಗೊಳೆ ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಯಕ್ಷಗಾನ ಪೋಷಕ ಪಣಂಬೂರು ವಾಸುದೇವ ಐತಾಳ್, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಹಾಗೂ ಆನಂದ ಪಿ. ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ ಶ್ರುತಕೀರ್ತಿ ರಾಜ್ ರಚಿಸಿದ ಯಕ್ಷಗಾನ ಶ್ರೀರಾಮ ಸೂಕ್ತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ತಮ್ಮ ಪೂರ್ಣಚಂದ್ರ ಕಲಾ ಪ್ರತಿಷ್ಠಾನದ ವತಿಯಿಂದ ರೂ.25 ಸಾವಿರ ನಗದು ಒಳಗೊಂಡ ಕೊಂಡದಕುಳಿ ರಾಮ ಹೆಗಡೆ ಪ್ರಶಸ್ತಿ ಹಾಗೂ ರೂ.1 ಲಕ್ಷ ನಗದು ಒಳಗೊಂಡ ಉತ್ತರ ಕನ್ನಡ ಯಕ್ಷಶ್ರೀ ಪ್ರಶಸ್ತಿ’ಯನ್ನು ಯಕ್ಷಗಾನ ಕಲಾರಂಗಕ್ಕೆ ಪ್ರದಾನ ಮಾಡಿದರು. ಸಮಾರಂಭದಲ್ಲಿ ಕಲಾವಿದ ಸತೀಶ್ ಪೂಜಾರಿ ನೈನಾಡು ಅವರಿಗೆ ರೂ.25 ಸಾವಿರ ವೈದ್ಯಕೀಯ ನೆರವು ವಿತರಿಸಲಾಯಿತು. ಅಲ್ಲದೆ 20 ಮಂದಿ ಯಕ್ಷಗಾನ ಕಲಾವಿದರಿಗೆ ತಲಾ ರೂ.20 ಸಾವಿರ ಗೃಹನಿರ್ಮಾಣ ಸಹಾಯಧನ ನೀಡಿ ಗೌರವಿಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲ ಕಲಾವಿದರಿಗೂ ಉಪಯುಕ್ತ ಉಡುಗೊರೆಗಳನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ಪೂರ್ವಾಹ್ನ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು. ಡಾ. ಶೈಲಜಾ ಭಟ್ ಮತ್ತು ಡಾ. ರಾಜೇಶ್ ನಾವಡ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರವನ್ನು ಶ್ರೀಕೃಷ್ಣ ಮಠದ ಪ್ರಬಂಧಕ ವಾಸುದೇವ ಆಚಾರ್ಯ ಉದ್ಘಾಟಿಸಿದರು.

ಪೂರ್ವಾಹ್ನ 11 ಗಂಟೆಗೆ ಕಲಾ ಮಂಡಲಂ ನಂದಕುಮಾರ್ ತಂಡದಿಂದ ಕಲ್ಯಾಣ ಸೌಗಂಧಿಕಂ ತುಳ್ಳಲ್ ತ್ರಯಮ್’ ಪ್ರದರ್ಶನ ಜರುಗಿತು. ಬಳಿಕ ಕಲೆ-ಕಲಾವಿದ-ಪ್ರೇಕ್ಷಕ: ಸಮನ್ವಯ ವಿಷಯದ ಕುರಿತು ನಡೆದ ಸಂವಾದದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾಭಟ್, ನೀಲ್ಕೋಡು ಶಂಕರ ಹೆಗಡೆ, ಪ್ರಜ್ವಲ್ ಗುರುವಾಯನಕೆರೆ, ಮಹೇಶ್ ಸಾಣೂರು, ವಾದಿರಾಜ ಕಲ್ಲುರಾಯ ಹಾಗೂ ನಂದೀಶ್ ಶೆಟ್ಟಿ ಬಿಲ್ಲಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರಸಂಗಕರ್ತ ಪವನ್ ಕಿರಣ್‌ಕೆರೆ ಸಂವಾದದ ಸಮನ್ವಯಕಾರರಾಗಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಹಾಗೂ ಹಿರಿಯ ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈ, ರೆಂಜಾಳ ರಾಮಕೃಷ್ಣ ರಾವ್ ಮತ್ತು ವಿ. ಗಣಪತಿ ಭಟ್ ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles