Monday, June 1, 2026

spot_img

ಶಿರೂರು ಹೊಳೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು

ಉಡುಪಿ : ಪ್ರವಾಸಕ್ಕೆಂದು ಕರಾವಳಿಗೆ ಆಗಮಿಸಿದ್ದ ಹಾವೇರಿ ಮೂಲದ 16 ವರ್ಷದ ವಿದ್ಯಾರ್ಥಿಯೊಬ್ಬ ಶಿರೂರು ಸಮೀಪದ ಸಂಕದಗುಂಡಿ ಹೊಳೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಹಾವೇರಿ ಸಮೀಪದ ಕೃಷಿನಗರ ನಿವಾಸಿ ಆಯುಷ್ (16) ಎಂದು ಗುರುತಿಸಲಾಗಿದೆ.

ಕುಟುಂಬದ ಸದಸ್ಯರು ಹಾಗೂ ಬಂಧುಗಳು ಸೇರಿ ಒಟ್ಟು ಏಳು ಮಂದಿ ಮುರುಡೇಶ್ವರ ಹಾಗೂ ಕನ್ಯಾಕುಮಾರಿ ಪ್ರವಾಸಕ್ಕಾಗಿ ಬಂದಿದ್ದರು. ಮುರುಡೇಶ್ವರ ಭೇಟಿ ಮುಗಿಸಿ ಶಿರೂರು ಸಂಕದಗುಂಡಿ ಹೊಳೆಯ ಬಳಿ ವಿಶ್ರಾಂತಿಗಾಗಿ ತಂಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕುಟುಂಬದವರು ಊಟದ ತಯಾರಿಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಆಯುಷ್ ಮತ್ತು ಮತ್ತೊಬ್ಬ ಬಾಲಕ ಸಮೀಪದ ಹೊಳೆಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಹೊಳೆಯ ಆಳವಾದ ಭಾಗದಲ್ಲಿ ಈಜಲು ಮುಂದಾದ ಆಯುಷ್ ನೀರಿನ ಆಳದ ಬಗ್ಗೆ ಅರಿವಿಲ್ಲದೆ ಮುಳುಗಿದ್ದಾನೆ.

ಆತನೊಂದಿಗೆ ಇದ್ದ ಇನ್ನೋರ್ವ ಬಾಲಕ ತಕ್ಷಣ ಕುಟುಂಬದವರಿಗೆ ವಿಷಯ ತಿಳಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿ ಬಾಲಕನ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದರು. ಮೃತ ಆಯುಷ್‌ನ ತಂದೆ-ತಾಯಿ ಗುಜರಾತ್‌ನಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿದ್ದು, ಆಯುಷ್ ಅಲ್ಲಿಯೇ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ತಾಯಿ, ಸಹೋದರ ಸೇರಿದಂತೆ ಕುಟುಂಬದ ಸದಸ್ಯರು ಪ್ರವಾಸದಲ್ಲಿ ಭಾಗಿಯಾಗಿದ್ದರು. ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles