Saturday, May 30, 2026

spot_img

ಶ್ರೀಕೃಷ್ಣ ಮಠಕ್ಕೆ ನಟ ವಸಿಷ್ಠ ಸಿಂಹ–ಹರಿಪ್ರಿಯಾ ದಂಪತಿ ಭೇಟಿ: ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ

ಉಡುಪಿ : ಕನ್ನಡ ಚಿತ್ರರಂಗದ ಜನಪ್ರಿಯ ನಟ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಶನಿವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ತಾರಾ ದಂಪತಿಯ ಆಗಮನ ಮಠಕ್ಕೆ ಭೇಟಿ ನೀಡಿದ್ದ ಭಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿತು.

ಬೆಳಿಗ್ಗೆ ಮಠಕ್ಕೆ ಆಗಮಿಸಿದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಮೊದಲು ಮಠದ ಸಂಪ್ರದಾಯದಂತೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಬೇಡಿಕೊಂಡರು. ದರ್ಶನದ ಬಳಿಕ ಪರ್ಯಾಯ ಶಿರೂರು ಮಠದ ವೇದ ವರ್ಧನ ಶ್ರೀ ಗಳನ್ನು ಭೇಟಿಯಾದ ತಾರಾ ದಂಪತಿ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ದಂಪತಿ ಹಾಗೂ ಅವರ ಮಗುವಿಗೆ ಶುಭ ಹಾರೈಕೆ ಸಲ್ಲಿಸಿ ಪ್ರಸಾದ ವಿತರಿಸಿದರು. ಮಠದ ಆಧ್ಯಾತ್ಮಿಕ ಪರಂಪರೆ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಕೆಲಕಾಲ ಮಠದ ವಾತಾವರಣದಲ್ಲಿ ಕಾಲ ಕಳೆದರು.ನಂತರ ಶ್ರೀಕೃಷ್ಣ ಮಠದ ಭೋಜನಗೃಹಕ್ಕೆ ತೆರಳಿದ ದಂಪತಿ, ಇತರ ಭಕ್ತರೊಂದಿಗೆ ನೆಲದ ಮೇಲೆ ಕುಳಿತು ಶ್ರೀಕೃಷ್ಣ ದೇವರ ಅನ್ನಪ್ರಸಾದ ಸ್ವೀಕರಿಸಿದರು. ಯಾವುದೇ ವಿಶೇಷ ಸೌಲಭ್ಯಗಳನ್ನು ಬಯಸದೆ ಸಾಮಾನ್ಯ ಭಕ್ತರಂತೆ ಅನ್ನಪ್ರಸಾದ ಸೇವಿಸಿದ ಅವರ ಸರಳತೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ಮಠದಲ್ಲಿ ತಾರಾ ದಂಪತಿಯನ್ನು ಕಂಡ ಭಕ್ತರು ಹಾಗೂ ಅಭಿಮಾನಿಗಳು ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ಮುಂದಾದರು. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸಹ ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಬೆರೆತು ಅವರ ಶುಭಾಶಯಗಳನ್ನು ಸ್ವೀಕರಿಸಿದರು. ಇತ್ತೀಚೆಗೆ ಕುಟುಂಬ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಈ ದಂಪತಿ, ತಮ್ಮ ಮಗುವಿನೊಂದಿಗೆ ಮೊದಲ ಬಾರಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿರುವುದು ವಿಶೇಷ ಗಮನ ಸೆಳೆಯಿತು. ಮಠದ ಶಾಂತ, ಭಕ್ತಿಮಯ ವಾತಾವರಣದಲ್ಲಿ ಕೆಲಕಾಲ ಕಳೆದು ದೇವರ ದರ್ಶನ ಪಡೆದ ತಾರಾ ದಂಪತಿ ಬಳಿಕ ತಮ್ಮ ಮುಂದಿನ ಕಾರ್ಯಕ್ರಮಗಳಿಗಾಗಿ ಪ್ರಯಾಣ ಬೆಳೆಸಿದರು.

ತಾರಾ ದಂಪತಿಯ ಭೇಟಿ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಕೆಲಕಾಲ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಅವರ ಆಗಮನವನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶ್ರೀಕೃಷ್ಣನ ದರ್ಶನ ಹಾಗೂ ಪರ್ಯಾಯ ಶಿರೂರು ಶ್ರೀಗಳ ಆಶೀರ್ವಾದ ಪಡೆದ ವಸಿಷ್ಠ ಸಿಂಹ–ಹರಿಪ್ರಿಯಾ ದಂಪತಿ ತಮ್ಮ ಭೇಟಿ ಸ್ಮರಣೀಯ ಅನುಭವವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles