Friday, May 29, 2026

spot_img

ಪಿಣರಾಯಿ ವಿಜಯನ್ ವಿರುದ್ಧ ಇ.ಡಿ. ದಾಳಿ ರಾಜಕೀಯ ಪ್ರೇರಿತ: ಸುರೇಶ್ ಕಲ್ಲಾಗರ

ಉಡುಪಿ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ಕ್ರಮ ರಾಜಕೀಯ ಪ್ರೇರಿತವಾಗಿದ್ದು, ಸಿಪಿಎಂ ಪಕ್ಷವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿಯ ದಾಳಿಗಳನ್ನು ನಡೆಸುತ್ತಿದೆ ಎಂದು ಸಿಪಿಎಂ ಮುಖಂಡ ಸುರೇಶ್ ಕಲ್ಲಾಗರ ಆರೋಪಿಸಿದರು.

ಉಡುಪಿಯಲ್ಲಿ ಸಿಪಿಎಂ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಿಣರಾಯಿ ವಿಜಯನ್ ಹಾಗೂ ಎಕ್ಸಾಲಾಜಿಕ್ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯವೇ ಗಮನಿಸಿದ್ದರೂ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇರಳದಲ್ಲಿ ಸಿಪಿಎಂ ಪಕ್ಷವನ್ನು ಗುರಿಯಾಗಿಸಿಕೊಂಡು ಹತಾಶ ಪ್ರಯತ್ನ ನಡೆಸುತ್ತಿದೆ ಎಂದರು. ಕೇರಳದ ಜನರು ಸಿಪಿಎಂ ಪಕ್ಷ ಮತ್ತು ಅದರ ನಾಯಕರ ಬೆನ್ನಿಗೆ ನಿಂತಿದ್ದು, ಇ.ಡಿ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೇ ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಸಿಪಿಎಂ ಪಕ್ಷ ತನಿಖೆಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುತ್ತಿಲ್ಲ. ಆದರೆ, ಸಂವಿಧಾನಾತ್ಮಕ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡು ವಿರೋಧ ಪಕ್ಷಗಳನ್ನು ಗುರಿಯಾಗಿಸುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಜಾರಿ ನಿರ್ದೇಶನಾಲಯ ಕಚೇರಿ ಎದುರು ಸಿಪಿಎಂ ಕೇಂದ್ರ ಸಮಿತಿ ನಾಯಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರನ್ನು ಬಂಧಿಸಿರುವುದು ದೇಶದ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿ ಎಂದು ಟೀಕಿಸಿದರು. ಈ ದೇಶದಲ್ಲಿ ದುಡಿಯುವ ವರ್ಗ ಇರುವವರೆಗೂ ಕಾರ್ಮಿಕ ವರ್ಗದ ರಾಜಕೀಯವನ್ನು ಯಾವ ಶಕ್ತಿಯೂ ಕೊನೆಗಾಣಿಸಲು ಸಾಧ್ಯವಿಲ್ಲ. ಜನರ ಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸಿಪಿಎಂ ಪಕ್ಷ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಸುರೇಶ್ ಕಲ್ಲಾಗರ ಹೇಳಿದರು.

ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ ವಿ. ಮಾತನಾಡಿ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ತುರ್ತು ಪರಿಸ್ಥಿತಿ ಕಾಲದವರೆಗೂ ಕಮ್ಯುನಿಸ್ಟ್ ನಾಯಕರು ಹೋರಾಟದ ಬದುಕನ್ನೇ ನಡೆಸಿದ್ದಾರೆ. ತ್ರಿಪುರ ಹಾಗೂ ಕೊಲ್ಕತ್ತಾದಲ್ಲಿ ಫ್ಯಾಸಿಸ್ಟ್ ದಾಳಿಗಳಿಗೆ ಎದುರಾಗಿ ಪ್ರಾಣ ತ್ಯಾಗ ಮಾಡಿದ ನಾಯಕರನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್. ನರಸಿಂಹ, ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೊಲ್ಲ, ಶೀಲಾವತಿ, ಉಮೇಶ್ ಕುಂದರ್, ಸುರೇಂದ್ರ ಎಚ್., ಬಲ್ಕೀಸ್, ಸಂಜೀವ ಬಳ್ಕೂರು, ಸರೋಜ ಹಾಗೂ ಚಿಕ್ಕ ಮೊಗವೀರ ಗಂಗೊಳ್ಳಿ ಭಾಗವಹಿಸಿದ್ದರು. ಕವಿರಾಜ್ ಎಸ್. ಕಾಂಚನ್ ಸ್ವಾಗತಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles