ಉಡುಪಿ : ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಮನೆ ಕೆಲಸದಾಕೆ ಕಳವು ಮಾಡಿರುವ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೂರು ನಿವಾಸಿ ಆಶಾ ಎಸ್. ಪೂಜಾರಿ ಅವರು ಹೇರೂರು ಗ್ರಾಮದಲ್ಲಿರುವ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಆರೂರಿನ ಲತಾ ಎಂಬವರನ್ನು ಮನೆ ಕೆಲಸಕ್ಕೆ ನೇಮಿಸಿದ್ದರು. ಏಪ್ರಿಲ್ 1ರಂದು ಮನೆಯ ಕಪಾಟಿನಲ್ಲಿಟ್ಟಿದ್ದ ತಂದೆಯ 25 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ಮನೆ ಕೆಲಸದಾಕೆ ಲತಾ ಅವರನ್ನು ವಿಚಾರಿಸಿದಾಗ, ತಾನು ಚಿನ್ನಾಭರಣಗಳನ್ನು ತೆಗೆದು ಅಡವಿಟ್ಟಿರುವುದಾಗಿ ಒಪ್ಪಿಕೊಂಡಿದ್ದು, ಬಳಿಕ ಅದನ್ನು ಬಿಡಿಸಿ ಕೊಡುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಆದರೆ ಬಳಿಕ ಚಿನ್ನಾಭರಣಗಳನ್ನು ಹಿಂದಿರುಗಿಸದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಕಳವಾದ ಚಿನ್ನಾಭರಣಗಳ ಮೌಲ್ಯ ಸುಮಾರು 3.50 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



