ಉಡುಪಿ : ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಖಾಸಗಿ ಬಸ್ಸೊಂದು ಸ್ಕೂಟಿಗೆ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಹ ಸವಾರೆಯಾಗಿದ್ದ 8 ವರ್ಷದ ಬಾಲಕಿ ಸಾತ್ವಿ ಶೆಟ್ಟಿ ತೀವ್ರ ಗಾಯಗಳಿಂದ ಮೃತಪಟ್ಟ ದುರ್ಘಟನೆ ಕಾಪು ಸಾಯಿ ಸರ್ವಿಸ್ ಸ್ಟೇಷನ್ ಸಮೀಪ ನಡೆದಿದೆ.

ಅಪಘಾತದಲ್ಲಿ ಸಾತ್ವಿ ಶೆಟ್ಟಿ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ಸ್ಕೂಟಿ ಸವಾರರಾಗಿದ್ದ ತಂದೆ ನಿತ್ಯಾನಂದ ಶೆಟ್ಟಿ ಅವರಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದುಬಾಯಿಯಲ್ಲಿ ವಾಸವಿದ್ದ ಈ ಕುಟುಂಬವು ಊರಿನಲ್ಲಿ ನೆಲೆಸುವ ಉದ್ದೇಶದಿಂದ ಇತ್ತೀಚೆಗೆ ಮರಳಿತ್ತು. ಸಾತ್ವಿಗಾಗಿ ಉಡುಪಿಯ ಖಾಸಗಿ ಶಾಲೆಯಲ್ಲಿ ಇದೇ ದಿನ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಮುಂದಿನ ದಿನ ನಿತ್ಯಾನಂದ ಶೆಟ್ಟಿ ಮಾತ್ರ ದುಬಾಯಿಗೆ ತೆರಳಬೇಕಾಗಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ.

ಕಾಪು ಪೇಟೆಯಿಂದ ಮನೆಗೆ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಘಟನೆ ಸ್ಥಳದಿಂದ ಮನೆಗೆ ಅರ್ಧ ಕಿಲೋಮೀಟರ್ ದೂರ ಮಾತ್ರ ಬಾಕಿ ಇತ್ತು ಎಂಬುದು ಮತ್ತಷ್ಟು ವಿಷಾದನೀಯವಾಗಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



