ಉಡುಪಿ : ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ವಿದ್ಯಾಪೋಷಕ್‌ನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಶೈಕ್ಷಣಿಕ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವರಾದ ಡಾ. ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತರಾಗದೆ ಜ್ಞಾನವಿಕಾಸಕ್ಕೆ ಪೂರಕವಾಗುವ ಪುಸ್ತಕಗಳ ಓದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್ ಮಾತನಾಡಿ, ಮೂಲ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಯಾವುದೇ ಪದವಿಯಲ್ಲಿಯೂ ಪಡೆಯುವ ಮೂಲಜ್ಞಾನ ಭವಿಷ್ಯದ ಉದ್ಯೋಗಕ್ಕೆ ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಅತಿಥಿಯಾಗಿ ಭಾಗವಹಿಸಿದ್ದ ಪ್ರೈಮ್ ಸಂಸ್ಥೆಯ ವರಿಷ್ಠ ರತ್ನ ಕುಮಾರ್ ತಮ್ಮ ಜೀವನಾನುಭವ ಹಂಚಿಕೊಂಡು, ಕಠಿಣ ಪರಿಶ್ರಮದಿಂದಲೇ ಉನ್ನತ ಸಾಧನೆ ಸಾಧ್ಯವೆಂದು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಹಿರಿಯರಾದ ಯು. ವಿಶ್ವನಾಥ ಶೆಣೈ, ಶಿಬಿರದ ನಿರ್ದೇಶಕರೂ ಮೈಲೈಫ್ ಸಂಸ್ಥೆಯ ಸ್ಥಾಪಕರಾದ ಪ್ರವೀಣ್ ಗುಡಿ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಅನಂತರಾಜ ಉಪಾಧ್ಯಾಯ, ಅಶೋಕ್ ಎಂ. ಹಾಗೂ ಡಾ. ಪ್ರತಿಮಾ ಜೆ. ಆಚಾರ್ಯ ಸಹಕರಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸಂಪನ್ಮೂಲ ವ್ಯಕ್ತಿ ಸೂರ್ಯನಾರಾಯಣ ಅಡಿಗ ಅವರು ಸಂವಹನ ಕೌಶಲ, ತಂಡ ಕಾರ್ಯಪಟುತೆ, ಸಮಸ್ಯೆ ಪರಿಹಾರ, ಮಾಹಿತಿ ಸಂಗ್ರಹ, ನಾಯಕತ್ವ ಹಾಗೂ ಸಮಯ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.



