ಉಡುಪಿ : ಜಿಲ್ಲೆಯ ತಾಯಿ ಮಕ್ಕಳ ಆಸ್ಪತ್ರೆಗೆ ಪೋರ್ಟಬಲ್ ಎಕ್ಸ್-ರೇ ಹಾಗೂ ಡಿಜಿಟಲ್ ರೇಡಿಯೋಗ್ರಫಿ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಅವುಗಳನ್ನು ಅಜ್ಜರಕಾಡಿನ ಜಿಲ್ಲಾ ಸರ್ವೇಕ್ಷಣ ಘಟಕದಲ್ಲಿ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಣಿಪಾಲ್ ಗ್ರೂಪ್ ಸಂಯುಕ್ತ ಆಶ್ರಯದಲ್ಲಿ ಟಿಎಂಜಿ ಸುನಿಧಿ ಫೌಂಡೇಷನ್ ಟ್ರಸ್ಟ್ನ ಸಿಎಸ್ಆರ್ ನಿಧಿಯಿಂದ ಈ ಉಪಕರಣಗಳನ್ನು ಒದಗಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ್ ಹುಬ್ಬಳ್ಳಿ ಉಪಕರಣಗಳನ್ನು ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಆರೋಗ್ಯ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮಣಿಪಾಲ್ ಗ್ರೂಪ್ ಕಳೆದ ದಶಕದಿಂದ ನಿರಂತರವಾಗಿ ಸಿಎಸ್ಆರ್ ನೆರವು ನೀಡುತ್ತ ಬಂದಿದೆ ಎಂದರು. ಕೋವಿಡ್ ಸಂದರ್ಭದಲ್ಲಿಯೂ ಅಗತ್ಯ ವಾಹನಗಳನ್ನು ಒದಗಿಸಿ ಇಲಾಖೆಗೆ ಬೆಂಬಲ ನೀಡಿರುವುದನ್ನು ಅವರು ಸ್ಮರಿಸಿದರು.

ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಎಐ ಆಧಾರಿತ ಪೋರ್ಟಬಲ್ ಎಕ್ಸ್-ರೇ ಹಾಗೂ ಡಿಜಿಟಲ್ ರೇಡಿಯೋಗ್ರಫಿ ಉಪಕರಣಗಳ ಬಳಕೆ ಆರೋಗ್ಯ ಕ್ಷೇತ್ರದ ಹಸಿರೀಕರಣದತ್ತ ಮಹತ್ವದ ಹೆಜ್ಜೆಯಾಗಿದ್ದು, ಪರಿಸರದ ಮೇಲೆ ಇರುವ ಇಂಗಾಲದ ಹೊರೆ ಕಡಿಮೆ ಮಾಡಲು ಸಹಕಾರಿ ಎಂದರು. ಈಗಾಗಲೇ ಜಿಲ್ಲೆಯ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿರುವುದು ರಾಜ್ಯದಲ್ಲೇ ಪ್ರಪ್ರಥಮ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಮಣಿಪಾಲ್ ಗ್ರೂಪ್ನ ಗ್ರೂಪ್ ಸಿಎಚ್ಆರ್ಒ ಪ್ರಮೋದ್ ಫೆರ್ನಾಂಡಿಸ್ ಮಾತನಾಡಿ, ಸಂಸ್ಥೆಯು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡಲು ಸಿದ್ಧವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಣಿಪಾಲ್ ಟೆಕ್ನಾಲಜೀಸ್ನ ಜಿಎಂ-ಎಚ್ಆರ್ ರೊನಾಲ್ಡ್ ಡಿಸೋಜಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಶೋಕ್ ಎಚ್ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಚಿದಾನಂದ ಸಂಜು ಸ್ವಾಗತಿಸಿ, ಸತೀಶ್ ರಾವ್ ನಿರೂಪಿಸಿ, ಶಶಿಧರ್ ವಂದಿಸಿದರು.



