ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ನಡೆಸುತ್ತಿದ್ದ ಧರಣಿಗೆ ಮಣಿದ ನಗರಾಭಿವೃದ್ಧಿ ಪ್ರಾಧಿಕಾರವು ಸಿಂಗಲ್ ಲೇಔಟ್‌ಗೆ ಅನುಮತಿ ಪತ್ರವನ್ನು ನೀಡಿದೆ. ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ ಪ್ರಾಧಿಕಾರದ ಆಯುಕ್ತ ಮಹೇಶ್ ಅವರು ಅನುಮತಿ ಪತ್ರವನ್ನು ಹಸ್ತಾಂತರಿಸಿದರು.

ಉಡುಪಿಯ ಬಡನಿಡಿಯೂರು ಸಮೀಪ ಕಡಲತೀರದಲ್ಲಿ 1.60 ಎಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಸಿಂಗಲ್ ಲೇಔಟ್ ಅನುಮತಿ ಕೋರಿ ರಘುಪತಿ ಭಟ್ ಅವರು ಎರಡು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ವಿವಿಧ ಕಾರಣಗಳನ್ನು ನೀಡಿ ನಿರಾಕರಿಸಲಾಗುತ್ತಿತ್ತು ಎಂದು ಆರೋಪಿಸಿ, ಮಾರ್ಚ್ 23ರಂದು ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಧರಣಿ ಆರಂಭಿಸಿದ್ದರು.

ಅನುಮತಿ ಪತ್ರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ರಘುಪತಿ ಭಟ್, ಮೂರು ತಿಂಗಳಲ್ಲಿ ನೀಡಬೇಕಿದ್ದ ಅನುಮತಿ ಪತ್ರ 24 ತಿಂಗಳ ನಂತರ ಲಭ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಧರಣಿ ಮೂಲಕವಾದರೂ ನ್ಯಾಯ ದೊರೆತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ನಗರಾಭಿವೃದ್ಧಿ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಹೆದ್ದಾರಿ ಅಗಲೀಕರಣದ ವೇಳೆ ನೀಡುವುದಾಗಿ ಹೇಳಿದ್ದ ಟಿಡಿಆರ್ ಸಹ ಮೂರು ವರ್ಷವಾದರೂ ಸಿಕ್ಕಿಲ್ಲ. ಈ ಬಗ್ಗೆ ಮುಂದೆಯೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಏಪ್ರಿಲ್ 11ರೊಳಗೆ ಬಾಕಿ ಕಡತಗಳ ವಿಲೇವಾರಿ ಆಗದಿದ್ದರೆ ಮತ್ತೊಮ್ಮೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರಾಜಕೀಯ ದಮನಕ್ಕಾಗಿ ಧರಣಿ ನಡೆಸಿಲ್ಲ. ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಡ್ಡಿಪಡಿಸಿದ್ದರಿಂದ ಶಾಸಕರ ಹೆಸರನ್ನು ಉಲ್ಲೇಖಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.



