ಉಡುಪಿ : ಉಡುಪಿ ದೊಡ್ಡಣಗುಡ್ಡೆ ರೈತ ಸೇವಾ ಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ–2026ರ ಎರಡನೇ ದಿನ, ಉಡುಪಿ ಜಿಲ್ಲೆಯ ಜಿ.ಐ. ಮಾನ್ಯತೆ ಪಡೆದ ಬೆಳೆಗಳಾದ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆಗೆ ಇರುವ ರಫ್ತು ಅವಕಾಶಗಳ ಕುರಿತು ಕಾರ್ಯಾಗಾರವನ್ನು ಅಪೇಡಾ ಸಹಯೋಗದಲ್ಲಿ ಆಯೋಜಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಉಡುಪಿ ಮಲ್ಲಿಗೆ ಮತ್ತು ಮಟ್ಟುಗುಳ್ಳ ಬದನೆಗೆ ಭೌಗೋಳಿಕ ಗುರುತಿನ ಮಾನ್ಯತೆ ದೊರೆತಿದ್ದು, ಈ ಬೆಳೆಗಳಡಿ ಕಾರ್ಯನಿರ್ವಹಿಸುತ್ತಿರುವ ರೈತ ಉತ್ಪಾದಕರ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರಫ್ತು ಕ್ಷೇತ್ರದಲ್ಲಿ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು. ಅಪೇಡಾ ಬೆಂಗಳೂರು ಕಚೇರಿಯ ಸಂಪನ್ಮೂಲ ವ್ಯಕ್ತಿಗಳಾದ ಮಧುಮತಿ ಹಾಗೂ ಕಾರಂತರವರು, ಈ ಬೆಳೆಗಳನ್ನು ರಫ್ತು ಮಾಡುವ ಸಾಧ್ಯತೆಗಳು, ಮಾರುಕಟ್ಟೆ ಬೇಡಿಕೆ ಹಾಗೂ ಅಪೇಡಾ ಸಂಸ್ಥೆಯಿಂದ ಲಭ್ಯವಾಗುವ ವಿವಿಧ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಪ್ರಸ್ತುತ ಜಿಲ್ಲೆಯಿಂದ ಜಲೋತ್ಪನ್ನಗಳೇ ಹೆಚ್ಚಾಗಿ ರಫ್ತಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಫ್ತು ಗುಣಮಟ್ಟದ ಉಡುಪಿ ಮಲ್ಲಿಗೆ ಮತ್ತು ಮಟ್ಟುಗುಳ್ಳ ಬದನೆ ಉತ್ಪಾದನೆಗೆ ರೈತರು ಒತ್ತು ನೀಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪಕುಲಪತಿ ಎಂ.ಕೆ. ನಾಯಕ್, ಮಟ್ಟುಗುಳ್ಳ ಬದನೆ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಬಂಗೇರಾ ಹಾಗೂ ಅನೇಕ ಬೆಳೆಗಾರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಹೇಮಂತಕುಮಾರ್ ಎಲ್. ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.



