ಉಡುಪಿ : ಜಿಲ್ಲೆಯ ಕಡಲ ತೀರಗಳು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚಿಸಿದರು.

ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡಲ ತೀರದ ಸುರಕ್ಷತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸಿಗರು ಸಮುದ್ರ ವಿಹಾರಕ್ಕಾಗಿ ಬಳಸುವ ಎಲ್ಲಾ ಪ್ರವಾಸಿ ಬೋಟ್‌ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದು ಮಾತ್ರ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್‌ಗಳು 45 ದಿನಗಳೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಪರವಾನಿಗೆ ಪಡೆಯಬೇಕು. ಅನುಮತಿ ಇಲ್ಲದ ಬೋಟ್‌ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ, ಪರವಾನಿಗೆಯನ್ನು ಪ್ರತಿವರ್ಷ ನವೀಕರಿಸಬೇಕು ಎಂದು ತಿಳಿಸಿದರು.

ಪ್ರವಾಸಿಗರ ಜೀವ ರಕ್ಷಣೆ ದೃಷ್ಟಿಯಿಂದ ಲೈಫ್ ಜಾಕೆಟ್ ಧಾರಣೆ ಅತ್ಯಾವಶ್ಯಕವಾಗಿದ್ದು, ಪ್ರತಿಯೊಬ್ಬ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಮೊದಲು ಲೈಫ್ ಜಾಕೆಟ್ ಧರಿಸುವಂತೆ ಕಡ್ಡಾಯಗೊಳಿಸಬೇಕು. ಈ ಕುರಿತು ಕರಪತ್ರಗಳು, ಸೂಚನಾ ಫಲಕಗಳನ್ನು ಪ್ರವಾಸಿ ತಾಣಗಳಲ್ಲಿ ಅಳವಡಿಸಬೇಕು. ಎಲ್ಲರೂ ಲೈಫ್ ಜಾಕೆಟ್ ಧರಿಸಿದ ಬಳಿಕವೇ ಬೋಟ್ ಸಾಗುತ್ತದೆ ಎಂಬ ಪ್ರೀ-ರೆಕಾರ್ಡೆಡ್ ಆಡಿಯೋ ವ್ಯವಸ್ಥೆಯನ್ನು ಬೋಟ್‌ಗಳಲ್ಲಿ ಅಳವಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯ ಎನ್.ಎಂ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.



