ಉಡುಪಿ : ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮಟ್ಕಾ ಜುಗಾರಿ ವಿರುದ್ಧ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಪ್ರಮುಖ ಮಟ್ಕಾ ಬುಕ್ಕಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ಕಾರ್ಕಳ ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿಗಳಲ್ಲಿ ನಾಲ್ವರು ಮಟ್ಕಾ ಸಂಗ್ರಹಕಾರರನ್ನು ಬಂಧಿಸಲಾಗಿದೆ. ಬಂಧಿತರಿಂದ ದೊರೆತ ಮಾಹಿತಿಯ ಆಧಾರದಲ್ಲಿ ಶಿವಳ್ಳಿ ಗ್ರಾಮದ ಲೀಯೋ ಕರ್ನೆಲಿಯೋ ಎಂಬಾತನನ್ನು ಪ್ರಮುಖ ಮಟ್ಕಾ ಬುಕ್ಕಿಯಾಗಿ ಗುರುತಿಸಿ ಬಂಧಿಸಲಾಗಿದೆ.

ಆಗಸ್ಟ್ 1ರಂದು ಕಾರ್ಕಳ ಸಾರ್ವಜನಿಕ ಬಸ್ ನಿಲ್ದಾಣದ ಬಳಿಯ ಮಹಾಮ್ಮಾಯಿ ಮುಖ್ಯಪ್ರಾಣ ಎಂಟರ್‌ಪ್ರೈಸಸ್ ಅಂಗಡಿಯಲ್ಲಿ ಸಾರ್ವಜನಿಕರಿಂದ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ವೀರೇಂದ್ರ ಶೆಟ್ಟಿ (42) ಎಂಬಾತನನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದರು. ಆರೋಪಿಯಿಂದ ರೂ 1,415 ನಗದು, ಮಟ್ಕಾ ಚೀಟಿ, ಬಾಲ್‌ಪೆನ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂದಾಡಿ ಗ್ರಾಮದ ಗುಡ್ಡಿ ಬಾರ್ ಸಮೀಪ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಕುಶಾಲ್ ಶೆಟ್ಟಿ (66) ಎಂಬಾತನನ್ನು ಬಂಧಿಸಿ, ರೂ 2,395 ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ಪೆನ್ ವಶಪಡಿಸಿಕೊಳ್ಳಲಾಗಿದೆ. ಅದೇ ದಿನ ಚಾಂತಾರು ಗ್ರಾಮದ ದಕ್ಷಿಣ್ ಬಾರ್ ಅಂಡ್ ಫ್ಯಾಮಿಲಿ ರೆಸ್ಟೋರೆಂಟ್ ಸಮೀಪ ಸಾರ್ವಜನಿಕರಿಂದ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ಚಂದ್ರಶೇಖರ ಶೆಟ್ಟಿ (55) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ರೂ 1,400 ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ಪೆನ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆತ ಸಂಗ್ರಹಿಸಿದ ಹಣವನ್ನು ರತ್ನಾಕರ ಶೆಟ್ಟಿ ಎಂಬಾತನಿಗೆ ನೀಡಿ ಕಮಿಷನ್ ಪಡೆಯುತ್ತಿದ್ದುದಾಗಿ ತಿಳಿಸಿದ್ದಾನೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.

ಬಂಧಿತರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಶಿವಳ್ಳಿ ಗ್ರಾಮದ ಲೀಯೋ ಕರ್ನೆಲಿಯೋ ಎಂಬ ಪ್ರಮುಖ ಮಟ್ಕಾ ಬುಕ್ಕಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಜಿಲ್ಲೆಯಲ್ಲಿ ಅಕ್ರಮ ಮಟ್ಕಾ ಜುಗಾರಿ ಚಟುವಟಿಕೆಗಳ ವಿರುದ್ಧ ಮುಂದೆಯೂ ನಿರಂತರ ಕಾರ್ಯಾಚರಣೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.



