ಉಡುಪಿ: ಪ್ರಖ್ಯಾತ ಚುಟುಕು ಕವಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಉಪ್ಪುಂದ ಗಣೇಶ್ ವೈದ್ಯ (56) ಅವರು ಜನವರಿ 23ರಂದು ಹೃದಯಾಘಾತದಿಂದ ಉಡುಪಿಯಲ್ಲಿ ನಿಧನರಾದರು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಚುಟುಕು ಕವಿತೆಗಳ ಮೂಲಕ ಗುರುತಿಸಿಕೊಂಡಿದ್ದ ಗಣೇಶ್ ವೈದ್ಯ, ಸರಳ ಪದಗಳಲ್ಲಿ ಆಳವಾದ ಅರ್ಥವನ್ನು ನಿರೂಪಿಸುವ ಶೈಲಿಯಿಂದ ಓದುಗರ ಮನ ಗೆದ್ದಿದ್ದರು. ಅವರ ಪ್ರಕಟಿತ ಕೃತಿಗಳು ಸಾಹಿತ್ಯಪ್ರೇಮಿಗಳಿಂದ ಅಪಾರ ಮೆಚ್ಚುಗೆ ಪಡೆದಿವೆ.

ಶ್ರೀಯುತರು ಚೆಸ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿ, ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ದ್ವಾರಕ ಚೆಸ್ ಸ್ಕೂಲ್‌ನ ಸಂಸ್ಥಾಪಕರಾಗಿದ್ದ ಅವರು, ಜ್ಯೋತಿಷ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಸ್ಥಾನ ಗಳಿಸಿದ್ದರು.

ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ–ಸಹೋದರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಗಣೇಶ್ ವೈದ್ಯ ಅವರ ನಿಧನಕ್ಕೆ ಸಾಹಿತ್ಯ ವಲಯದ ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



