ಉಡುಪಿ : ಸಿದ್ದಾಪುರ ಏತ ನೀರಾವರಿ ಯೋಜನೆಯ ಫಲಾನುಭವಿಗಳಾದ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ಅಭಿಪ್ರಾಯ ಹಾಗೂ ಗ್ರಾಮಸಭೆ ನಿರ್ಣಯಗಳಿಗೆ ಬೆಲೆ ಕೊಡದೆ ಕಾಮಗಾರಿಯನ್ನು ಹಠಾತ್ತನೆ ನಿಲ್ಲಿಸಿರುವುದು ರೈತವಿರೋಧಿ ಧೋರಣೆಯಾಗಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ಸಿದ್ದಾಪುರ ಸರ್ಕಲ್ ಬಳಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಬೃಹತ್ ಜನಾಗ್ರಹ ಸಭೆ’ಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾದರೆ ಸಂಘ ಸದಾ ರೈತರ ಪರವಾಗಿ ನಿಲ್ಲಲಿದೆ ಎಂದರು. ಜನಪ್ರತಿನಿಧಿಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕೆ ಹೊರತು ರೈತ ವಿರೋಧಿಯಾಗಿ ನಡೆದುಕೊಳ್ಳಬಾರದು ಎಂದು ಹೇಳಿದರು.

ವಾರಾಹಿ ಯೋಜನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳಲ್ಲಿ ಲೋಪ ಹಾಗೂ ಕಳಪೆತನ ಕಂಡುಬಂದಿರುವುದರಿಂದ ಸಿದ್ದಾಪುರ ಏತ ನೀರಾವರಿ ಯೋಜನೆಯಲ್ಲೂ ಇಂತಹ ಪರಿಸ್ಥಿತಿ ಉಂಟಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸಮಸ್ಯೆ ಗಂಭೀರವಾದಾಗ ಹೋರಾಟ ಅನಿವಾರ್ಯವಾಗುತ್ತದೆ. ಈ ಹೋರಾಟವನ್ನು ಪರಿಹಾರದ ಹೋರಾಟವಾಗಿ ಮುಂದುವರೆಸಬೇಕಿದೆ ಎಂದು ಹೇಳಿದರು.

ಸಭೆಯ ಬಳಿಕ ಕರ್ನಾಟಕ ನೀರಾವರಿ ನಿಗಮ (ವಾರಾಹಿ) ಕಚೇರಿಗೆ ಜಾಥಾ ನಡೆಸಿ, ಕಾಮಗಾರಿ ತಡೆ ಆದೇಶ ಹಿಂಪಡೆಯುವಂತೆ ಹಾಗೂ ಯೋಜನೆಯನ್ನು ಪ್ರಸ್ತುತ ಸ್ಥಳದಲ್ಲೇ ಮುಂದುವರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ವಿವಿಧ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಹಾಗೂ ಸಾವಿರಾರು ರೈತರು ಪಾಲ್ಗೊಂಡಿದ್ದರು.



