Thursday, March 26, 2026

spot_img

ಅತ್ಯಂತ ಎಳೆಯ ಯತಿಯಾಗಿ ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ ವೇದವರ್ಧನ ತೀರ್ಥರು…

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಶೀರೂರು ಪರ್ಯಾಯ ಮಹೋತ್ಸವ ಭಕ್ತಿಭಾವ ಮತ್ತು ಸಂಭ್ರಮದೊಂದಿಗೆ ಅದ್ದೂರಿಯಾಗಿ ನೆರವೇರಿತು. ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಭಾನುವಾರ ಪ್ರಾತಃಕಾಲ ಸರ್ವಜ್ಞ ಪೀಠಾರೋಹಣ ಮಾಡಿ, ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀ ಕೃಷ್ಣನ ಪೂಜಾಧಿಕಾರವನ್ನು ಸ್ವೀಕರಿಸಿದರು. ಇದುವರೆಗಿನ ಪರಂಪರೆಯಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದ ಅತ್ಯಂತ ಎಳೆಯ ಪ್ರಾಯದ ಯತಿಯಾಗಿ ಶ್ರೀ ವೇದವರ್ಧನ ತೀರ್ಥರು ಗುರುತಿಸಿಕೊಂಡರು.

ಈ ಮಹೋತ್ಸವದೊಂದಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ನಾಲ್ಕನೇ ಪರ್ಯಾಯ ಮಹೋತ್ಸವವೂ ವೈಭವಯುತವಾಗಿ ಸಮಾಪ್ತಿಯಾಯಿತು. ಇದು ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿನ 253ನೇ ದ್ವೈವಾರ್ಷಿಕ ಪರ್ಯಾಯವಾಗಿದ್ದು, ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯ ಮಹೋತ್ಸವವೂ ಹೌದು.

ಪರ್ಯಾಯೋತ್ಸವದ ಅಂಗವಾಗಿ ಪ್ರಾತಃಕಾಲ 5.45ರ ಶುಭ ಮಹೂರ್ತದಲ್ಲಿ ಅಕ್ಷಯ ಪಾತ್ರೆ ಹಸ್ತಾಂತರ ನಡೆಯಿತು. ಅದಕ್ಕೂ ಮುನ್ನ ಬೆಳಗಿನ ಜಾವ 1.30ಕ್ಕೆ ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ನೆರವೇರಿಸಲಾಯಿತು. ಪ್ರಾತಃಕಾಲ 3 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭಗೊಂಡಿದ್ದು, ನೂರಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು, ಟ್ಯಾಬ್ಲೋಗಳು, ಭಜನಾ ತಂಡಗಳು ಭಾಗವಹಿಸಿ ಮೆರವಣಿಗೆಯನ್ನು ಕಣ್ಮನ ಸೆಳೆಯುವಂತೆ ಮಾಡಿದರು.

ಪರ್ಯಾಯ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರು ಹೆಗಲುಕೊಟ್ಟು ಹೊರುವ ಮೇನೆಯಲ್ಲಿ ಆಗಮಿಸಿದರೆ, ಇತರ ಆರು ಅಷ್ಟಮಠಾಧೀಶರು ವಾಹನ ಪಲ್ಲಕ್ಕಿಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಮೆರವಣಿಗೆಯ ಕೊನೆಯಲ್ಲಿ ಅಷ್ಟಮಠಾಧೀಶರ ಪಲ್ಲಕ್ಕಿ ಮೆರವಣಿಗೆ ನಡೆದಿದ್ದು, ಟ್ಯಾಬ್ಲೋಗಳೊಂದಿಗೆ ಕೀರ್ತಿ ಶೇಷ ಶ್ರೀ ಲಕ್ಷ್ಮೀವರ ತೀರ್ಥರ ಪ್ರತಿಕೃತಿಯೂ ಮೆರವಣಿಗೆಯಲ್ಲಿ ಗಮನ ಸೆಳೆದಿತು. ಬೆಳಿಗ್ಗೆ 5.15ಕ್ಕೆ ಶ್ರೀ ವೇದವರ್ಧನ ತೀರ್ಥರು ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣ ದರ್ಶನ ಪಡೆದರು. ನಂತರ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇವರ ದರ್ಶನ ನೆರವೇರಿತು. 5.55ಕ್ಕೆ ಬಡಗು ಮಾಳಿಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್ ನಡೆಯಿದ್ದು, ಅಷ್ಟಮಠಾಧೀಶರಿಗೆ ಅರಳು ಗದ್ದುಗೆ ಗೌರವ ಸಲ್ಲಿಸಲಾಯಿತು.

ಬೆಳಿಗ್ಗೆ 6.15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಕಾರ್ಯಕ್ರಮ ಪ್ರಾರಂಭಗೊಂಡಿದ್ದು, ಅನೇಕ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಿದರು. ಈ ಸಂದರ್ಭದಲ್ಲಿ ಅಷ್ಟಮಠಾಧೀಶರಿಂದ ಅನುಗ್ರಹ ಸಂದೇಶಗಳು ಹಾಗೂ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥರಿಂದ ಅನುಗ್ರಹ ಭಾಷಣ ನಡೆಯಿತು.

ಪರ್ಯಾಯೋತ್ಸವದ ಪ್ರಮುಖ ಘಟ್ಟವಾಗಿ ಬೆಳಿಗ್ಗೆ 10.30ಕ್ಕೆ ಶ್ರೀ ಕೃಷ್ಣ ದೇವರಿಗೆ ಶ್ರೀ ವೇದವರ್ಧನ ತೀರ್ಥರಿಂದ ಮೊದಲ ಮಹಾಪೂಜೆ ಸಲ್ಲಿಸಲಾಯಿತು. ಪರ್ಯಾಯೋತ್ಸವದ ಅಂಗವಾಗಿ ನಗರದ ಸುಮಾರು 15ಕ್ಕೂ ಅಧಿಕ ವೇದಿಕೆಗಳಲ್ಲಿ ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಂದಿನ ಒಂದು ವಾರಗಳ ಕಾಲ ಉಡುಪಿಯಲ್ಲಿ ವಿವಿಧ ಧಾರ್ಮಿಕ, ಕಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶೀರೂರು ಪರ್ಯಾಯೋತ್ಸವ ಉಡುಪಿ ನಗರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ಮೆರುಗು ನೀಡಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles